ಬೆಳಗಾವಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ತಾರಕಕ್ಕೇರಿರುವ ನಡುವಲ್ಲೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿಯಾಗಬೇಕೆಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ.
ಒಂದೆಡೆ ಕಾರ್ಯಕರ್ತರು ಸಭೆ ಸಮಾರಂಭಗಳಲ್ಲಿ ಸತೀಶ್ ಜಾರಕಿಹೊಳಿ ಅವರ ಅಭಿಮಾನಿಗಳು ‘ಮುಂದಿನ ಸಿಎಂ ಜಾರಕಿಹೊಳಿ’ ಎಂದು ಘೋಷಣೆ ಕೂಗುತ್ತಿದ್ದರೆ. ಮತ್ತೊಂದೆಡೆ ಮತ್ತಷ್ಟು ಕಾರ್ಯಕರ್ತರು ದೇವರ ಮೊರೆ ಹೋಗಿದ್ದಾರೆ.
ಬೆಳಗಾವಿಯಲ್ಲಿ ಅಯ್ಯಪ್ಪ ಮಾಲಾಧಾರಿ ವ್ಯಕ್ತಿಯೊಬ್ಬರು ಸತೀಶ್ ಜಾರಕಿಹೊಳಿ ಸಿಎಂ ಆಗಬೇಕೆಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ಮೊರೆ ಹೋಗಿದ್ದಾರೆ.
ಗೋಕಾಕ ಪಟ್ಟಣದ ಅಯ್ಯಪ್ಪ ಮಾಲಾಧಾರಿಯಾಗಿರುವ ಸಂತೋಷ ಸಂಕಪಾಳೆ ಎಂಬುವವರು ಜಾರಕಿಹೊಳಿ ಮುಂದಿನ ಸಿಎಂ ಆಗಬೇಕು ಎಂದು ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ಸತೀಶ್ ಜಾರಕಿಹೊಳಿ ಫೋಟೋ ತಲೆಮೇಲೆ ಹೊತ್ತುಕೊಂಡು ಹೋಗಿದ್ದಾರೆ. ಈ ಕುರಿತ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.