ದೊಡ್ಡಬಳ್ಳಾಪುರ: ಗುರುವಾರ ರಾತ್ರಿ ನಿಧನರಾದ ಶ್ರೇಷ್ಠ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನುಡಿನಮನ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಶುಕ್ರವಾರ ನಡೆಯಿತು.ಮನಮೋಹನ್ ಸಿಂಗ್ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೌನಾಚರಣೆಯ ಮೂಲಕ ಸಂತಾಪ ಸೂಚಿಸಲಾಯಿತು.
ಶ್ರೀ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ದೇಶದ ಆರ್ಥಿಕತೆಗೆ ಚೇತರಿಕೆಯ ಚೈತನ್ಯವನ್ನು ನೀಡಿ ಪ್ರಗತಿಗೆ ಮುನ್ನುಡಿ ಬರೆದ ಮನಮೋಹನ್ ಸಿಂಗ್ ಅವರು ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ಪರಿಕಲ್ಪನೆಗಳನ್ನು ದೇಶದ ಅಭಿವೃದ್ಧಿಗೆ ಪೂರಕವಾಗಿ ಅನುಷ್ಠಾನಗೊಳಿಸಿದ್ದರು. ಅವರೊಬ್ಬ ದೂರದರ್ಶಿತ್ವವುಳ್ಳ ಚಿಂತಕರಾಗಿದ್ದರು. ಮರಣೋತ್ತರವಾಗಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದರು.
ಎಸ್.ಡಿ.ಯು.ಐ.ಎಂನ ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಮನಮೋಹನ್ ಸಿಂಗ್ ಜಗತ್ತು ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರು. ಅವರ ದೂರಗಾಮಿ ಆರ್ಥಿಕ ನೀತಿಗಳು ದೇಶದ ಭವಿಷ್ಯವನ್ನು ಭದ್ರಗೊಳಿಸಿವೆ. ಸಂಕಷ್ಟದ ಸಂದರ್ಭದಲ್ಲಿ ಅವರು ಈ ದೇಶಕ್ಕೆ ಕೊಟ್ಟ ಮಹತ್ವದ ಹಣಕಾಸು ನೀತಿಗಳು ಇಂದು ದೇಶವನ್ನು ಜಾಗತಿಕ ಶಕ್ತಿಯಾಗಿ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ ಎಂದರು.
ಪ್ರಧಾನಿಯಾಗಿ ಮನಮೋಹನ್ ಸಿಂಗ್ ಜಾರಿಗೆ ತಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಗ್ರಾಮೀಣ ಭಾರತದಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಯಾಯಿತು. ಮಾಹಿತಿ ಹಕ್ಕು ಕಾಯಿದೆ ಜಾರಿಗೊಳಿಸಿದರು. ಅಮೆರಿಕಾದೊಂದಿಗೆ ಮಾಡಿಕೊಂಡ ನಾಗರಿಕ ಪರಮಾಣು ಒಪ್ಪಂದ, ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನವನ್ನು ಭದ್ರಪಡಿಸಿತ್ತು. ನಿರಂತರ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸಿತು. ಆಧಾರ್ ಯೋಜನೆ ಜಾರಿಗೆ ಬಂದಿದ್ದೂ ಮನಮೋಹನ್ ಸಿಂಗ್ ಅವರ ಅವಧಿಯಲ್ಲೇ ಎಂಬುದು ಗಮನಾರ್ಹ ಎಂದರು.
ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಮಾನವ ಸಂಪನ್ಮೂಲ ನಿರ್ದೇಶಕ ಪ್ರೊ .ಬಾಬುರೆಡ್ಡಿ, ಅಕಾಡೆಮಿಕ್ ಡೀನ್ ಡಾ.ಶ್ರೀನಿವಾಸರೆಡ್ಡಿ, ಎಸ್.ಡಿ.ಯು.ಐ.ಎಂ ಆಡಳಿತಾಧಿಕಾರಿ ಐ.ಎಂ.ರಮೇಶ್ ಕುಮಾರ್, ಪ್ರಾಂಶುಪಾಲ ಡಾ.ಆರ್.ನಾಗರಾಜ್, ಆರ್.ಎಲ್.ಜೆ.ಐ.ಟಿ ಪ್ರಾಧ್ಯಾಪಕ ಶಂಕರ್ ನುಗ್ಗೇಹಳ್ಳಿ, ಅಶೋಕ್, ವ್ಯವಸ್ಥಾಪಕ ಎಸ್.ಯತಿನ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ಪ್ರಕಾಶ್, ಗೋವಿಂದರಾಜು, ರಘು ಮತ್ತಿತರರು ಉಪಸ್ಥಿತರಿದ್ದರು.