ಬೆಳಗಾವಿಯ ಅಧಿವೇಶನದಲ್ಲಿ ನಡೆದ ಸಿ.ಟಿ .ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದ ದುರ್ಘಟನೆಗಳ ಬಗ್ಗೆ ” ಸದನದ ಗೌರವ ಕಾಪಾಡಿ ” ಎಂಬ ಘೋಷವಾಕ್ಯದೊಂದಿಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪಕ್ಷದ ಕಚೇರಿಯ ಮುಂಭಾಗದಲ್ಲಿ ಇಂದು ಬೆಳಗ್ಗೆ ಏರ್ಪಡಿಸಿದ್ದ ಕಪ್ಪು ಪಟ್ಟಿ ಧರಿಸಿ ನಡೆದ ಖಂಡನಾ ಸಭೆಯಲ್ಲಿ ಮಾತನಾಡಿದ ಪಕ್ಷದ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ “ಸಿ.ಟಿ. ರವಿ ರವರ ಸ್ತ್ರೀನಿಂದನೆ, ನಂತರದಲ್ಲಿ ನಡೆದ ಎಲ್ಲಾ ಘಟನೆಗಳು ಶಾಂತಿಪ್ರಿಯ ಕರ್ನಾಟಕಕ್ಕೆ ಕಪ್ಪುಮಸಿ ಬಳಿದಂತಾಗಿದೆ.
ಸದನದಲ್ಲಿಯೇ ಮಹಿಳೆ ಅದರಲ್ಲಿಯೂ ಪ್ರಮುಖ ಮಂತ್ರಿಯೊಬ್ಬರಿಗೆ ಈ ರೀತಿಯ ನಿಂದನೆ ಆಗುವುದಿದ್ದರೆ , ಮಹಿಳೆಯರಿಗೆ ಕರ್ನಾಟಕವು ಎಷ್ಟು ಸುರಕ್ಷಿತ ಎಂಬ ಅನುಮಾನ ಕಾಡುತ್ತದೆ. ಸಿ.ಟಿ. ರವಿ ವರ್ತನೆ ಯಾವುದೇ ನಾಗರೀಕ ಸಮಾಜ ಕ್ಷಮಿಸುವುದಿಲ್ಲ” ಎಂದು ಕಳವಳ ವ್ಯಕ್ತಪಡಿಸಿದರು.ಮುಂದುವರೆದು ” ಸಭಾಪತಿಗಳು ತೆಗೆದುಕೊಂಡಿರುವ ರೂಲಿಂಗ್ ಸಹ ಪಕ್ಷಪಾತ ರೀತಿಯ ಅನುಮಾನ ರಾಜ್ಯದ ಜನತೆಗೆ ಕಾಡಲು ಆರಂಭಿಸಿದೆ. ಘಟನೆ ನಡೆದ ದಿನವೇ ರವಿಗೆ ಕ್ಲೀನ್ ಚಿಟ್ ನೀಡುವಂತಹ ಪ್ರಕ್ರಿಯೆಗಳು ಬಸವರಾಜ ಹೊರಟ್ಟಿ ಅವರಿಂದ ಆಗಿದೆ. ನಂತರದ ದಿನಗಳಲ್ಲಿ ಸಭಾಪತಿಗಳ ನೇತೃತ್ವದಲ್ಲಿ ಅಲ್ಲಿದ್ದ ಎಲ್ಲಾ ಶಾಸಕರುಗಳನ್ನು ಕರೆಸಿ ವಿಚಾರಣೆ ನಡೆಸದೆ ಪಕ್ಷಪಾತ ಎನ್ನುವ ರೀತಿಯಲ್ಲಿ ತಮ್ಮ ರುಲಿಂಗ್ ನೀಡಿರುವುದು ಅನುಮಾನ ಮೂಡುವಂತಿದೆ ” ಎಂದು ಜಗದೀಶ್ ಚಂದ್ರ ಕಿಡಿಕಾರಿದರು.
“ಕೋಟ್ಯಾಂತರ ರೂ.ಜನತೆಯ ತೆರಿಗೆ ಹಣವನ್ನು ಅನವಶ್ಯಕವಾಗಿ ಈ ರೀತಿ ಸದನದ ಗೌರವ ಹಾಳು ಮಾಡುವ ರೀತಿಯಲ್ಲಿ ದುರ್ವಿನಿಯೋಗವಾದರೆ ಆಮ್ ಆದ್ಮಿ ಪಕ್ಷ ಎಂದಿಗೂ ಸಹಿಸುವುದಿಲ್ಲ , ಶಾಸಕರುಗಳು ತಮ್ಮ ವೈಯಕ್ತಿಕ ದ್ವೇಷಗಳನ್ನು ಸಾಧಿಸಲು ಚಿಂತಕರ ಚಾವಡಿಯಂತಹ ಮೇಲ್ಮನೆಯನ್ನು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ದುರದೃಷ್ಟಕರ . ಇಂತಹ ಚಾರಿತ್ರ್ಯ ಹೀನ, ಭ್ರಷ್ಟ ವ್ಯಕ್ತಿಗಳು ಮೇಲ್ಮನೆಗೆ ಆಕಸ್ಮಿಕವಾಗಿ ಬರುತ್ತಿರುವುದನ್ನು ಎಲ್ಲ ಪಕ್ಷಗಳು ತಡೆಗಟ್ಟಬೇಕು ” ಎಂದು ಜಗದೀಶ್ ಚಂದ್ರ ತಿಳಿಸಿದರು. ಪಕ್ಷದ ಅನೇಕ ಮುಖಂಡರುಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.