ಬೆಳಗಾವಿ: ‘ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ ‘2ಎ’ ಮೀಸಲಾತಿ ನೀಡಬೇಕು ಮತ್ತು ಹೋರಾಟಗಾರರ ಮೇಲೆ ಲಾಠಿಚಾರ್ಜ್ ಮಾಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಆರಂಭಿಸಲಾಗಿದ್ದ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
ಬೆಳಗಾವಿಯ ಅಂಬೇಡ್ಕರ್ ಗಾರ್ಡನ್ನಲ್ಲಿ ಈ ಪ್ರತಿಭಟನೆ ನಡೆಯುತ್ತಿತ್ತು. ಸ್ಥಳಕ್ಕೆ ತೆರಳಿದ ಮಾಜಿ ಸಚಿವ ಸಿ.ಸಿ.ಪಾಟೀಲ್, ಶಾಸಕರಾದ ಡಾ.ವಿ.ಐ.ಪಾಟೀಲ್, ಹೆಚ್.ಎಸ್.ಶಿವಶಂಕರ್ ಅವರು, ಪ್ರತಿಭಟನಾನಿರತ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಪ್ರತಿಭಟನೆ ಆರಂಭವಾದ ದಿನ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗಿದ್ದೆ. ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸಲು ಮೂವರು ಮಂತ್ರಿಗಳನ್ನು ಕಳುಹಿಸಿದರೂ, ಸ್ವಾಮೀಜಿಗಳು ಮತ್ತು ಅವರ ಬೆಂಬಲಿಗರು ನಿರಾಕರಿಸಿದ್ದರು. ಇದು ಸರ್ಕಾರ ಲಿಂಗಾಯತ ವಿರೋಧಿ ಎಂಬ ಸಂದೇಶವನ್ನು ರವಾನಿಸಿತ್ತು. ಇದೀಗ ಸಿದ್ದರಾಮಯ್ಯ ಅವರು ಡಿಸೆಂಬರ್ 21 ಸಂದು ಸರ್ವಪಕ್ಷಗಳ ಪಂಚಮಸಾಲಿ ಲಿಂಗಾಯತ ಶಾಸಕರ ಸಭೆ ಕರೆದಿದ್ದಾರೆಂದು ಹೇಳಿದರು.
ಮೀಸಲಾತಿ ಬೇಡಿಕೆಯನ್ನು ಇದ್ದಕ್ಕಿದಂತೆಯೇ ಬಗೆಹರಿಸಲು ಸಾಧ್ಯವಿಲ್ಲ. ಪ್ರಕರಣ ಇನ್ನೂ ನ್ಯಾಯಾಲಯದ ಅಂಗಳದಲ್ಲಿದೆ. ಈ ಹಂತದಲ್ಲಿ ಸಮುದಾಯದ ಬೇಡಿಕೆಯನ್ನು ಈಡೇರಿಸಲು ಸರ್ಕಾರಕ್ಕೆ ಅಸಾಧ್ಯ ಎಂದು ತಿಳಿಸಿದರು.
ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಮೀಸಲಾತಿ ವಿಷಯದಲ್ಲಿ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 21ರಂದು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. ಹೀಗಾಗಿ ನಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ. ಸಭೆಯಲ್ಲಿ ಕೈಗೊಳ್ಳುವ ನಿರ್ಣಯ ಆಧರಿಸಿ ಮುಂದಿನ ಹೆಜ್ಜೆ ಇರಿಸುತ್ತೇವೆಂದು ಹೇಳಿದ್ದಾರೆ.