ಪ್ರತಿ ಹಳ್ಳಿ, ಊರು ಕೇರಿಗಳಲ್ಲಿ ಒಂದಲ್ಲ ಒಂದು ರೋಟರಿ ಸಂಸ್ಥೆಯ ಕೊಡುಗೆ ಇದ್ದೇ ಇರುತ್ತವೆ. ಕೇವಲ ಶೈಕ್ಷಣಿಕ, ಆರೋಗ್ಯ ಮಾತ್ರಕ್ಕೆ ರೋಟರಿ ಸಂಸ್ಥೆ ಸೀಮಿತ ಆಗಿಲ್ಲ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲಾ ಕಡೆ ಇವರ ಸಹಕಾರ ನೋಡಬಹುದು. ಇಂಥಹ ರೋಟರಿ ಸಂಸ್ಥೆ ಬಗ್ಗೆ ಸಾರಥಿ ಕಮ್ಯುನಿಕೇಶನ್ – ಮಾಧ್ಯಮ ಸಂಪನ್ಮೂಲ ಸಂಸ್ಥೆ ತನ್ನ ಶೇರ್ ವಿತ್ ಶಮಂತ ಪಾಡ್ ಕಾಸ್ಟ್ ಮಾತು ಕತೆ ಯಲ್ಲಿ ಬೆಂಗಳೂರು ರೋಟರಿ ಸಂಸ್ಥೆ ಯ ಅಧ್ಯಕ್ಷೆ ಗೌರಿ ಓಜಾ ಜೊತೆ ತೊಡಗಿದ್ದಾರೆ.
`ನೃಪತಿಗೆ ಆತ್ಮವಿಚಾರವೂ ಬೇಕು ಭೋಗ ವಿಚಾರವೂ ಬೇಕು’ ಎಂಬ ಮಾತಿದೆ ಇದು ಸಾರ್ವಕಾಲಿಕವೂ ಹೌದು! ಅಂದರೆ ನಮ್ಮ ಬದುಕಿಗೆ ಅನ್ನ,ಅರಿವೆ, ಆಶ್ರಯ, ಅಕ್ಷರ, ಆರೋಗ್ಯ ಎಲ್ಲವೂ ಬೇಕು! ಇವೆಲ್ಲವೂ ಎಲ್ಲರಿಗೂ ದೊರೆತಿವೆಯೇ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಂಡರೆ ಉತ್ತರಿಸಲು ತಡವರಿಸಬೇಕಾಗುತ್ತದೆ. ಶೇಖಡಾ ನೂರಕ್ಕೆ ನೂರರಷ್ಟು ಸುಸ್ಥಿರ ಸಮಾಜ ನಮ್ಮದು ಎಂದು ಹೇಳಿಕೊಳ್ಳುವ ಧೈರ್ಯ ನಮ್ಮಲಿಲ್ಲ . ಆದರೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವುದು ರೋಟರಿ ಸಂಸ್ಥೆ.
ರೋಟರಿ ನಮಗೆಲ್ಲಾ ತಿಳಿದಿರುವಂತೆ ೧೯೦೫ ಫೇಬ್ರವರಿ ೨೩ ರಂದು ಅಮೆರಿಕಾದ ಚಿಕಾಗೊದಲ್ಲಿ ಪ್ರಾರಂಭವಾದ ಸಮಾಜಸೇವಾಸಂಸ್ಥೆ. ಈಗ ವಿಶ್ವದಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. `ನಾನು ನನ್ನ ಕುಟುಂಬ’ , `ನಾನು ನನ್ನ ಮನೆ’ ಎಂದು ಸೀಮಿತ ಪರಿಧಿಯಲ್ಲಿ ಯೋಚನೆ ಮಾಡುವ ಕಾಲದಲ್ಲಿ `ಸಮಾಜದ ಕಾಳಜಿ ನಮ್ಮ ಕರ್ತವ್ಯ’ ಎಂದು ಮನಗಂಡು ಯಾವುದೇ ಒತ್ತಡ ಹಾಗು ಭ್ರಷ್ಟಾಚಾರದ ಛಾಯೆಗೂ ಒಳಗಾಗದೆ ಕಾರ್ಯಪ್ರವೃತ್ತರಾಗಿರುವ ಅಂತರಾಷ್ಟಿಯ ರೋಟರಿ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ.
ಭಾರತದ ಪ್ರಮುಖ ಸಮಸ್ಯೆಯಾಗಿದ್ದ ಪೊಲಿಯೋ ನಿರ್ಮೂಲನ ಕಾರ್ಯದಲ್ಲಿ ಸರಕಾರದೊಂದಿಗೆ ರೋಟರಿ ಸಂಸ್ಥೆಯವರು ಕಟಿಬದ್ಧವಾಗಿ ಕೆಲಸ ಮಾಡಿರುವುದೇ ಪ್ರತ್ಯಕ್ಷ ಸಾಕ್ಷಿ. ಇನ್ನೂ ಇಂಥ ಅನೇಕ ಉಪಕ್ರಮಗಳು ಬೆಂಗಳೂರಿನ ರೋಟರಿ ಕ್ಲಬ್ ನ ಅಧ್ಯಕ್ಷರಾಗಿರುವ ಶ್ರೀಮತಿ ಗೌರಿ ಓಝ ಅವರ ಸಾರಥ್ಯದಲ್ಲಿ ಅನೂಚಾನವಾಗಿ ಮುಂದುವರೆದುಕೊಂಡು ಬರುತ್ತಿವೆ. `ಶಾಂತಿ ಸ್ಥಾಪನೆ’, `ಮೂಲಭೂತ ಶಿಕ್ಷಣ ಮತ್ತು ಸಾಕ್ಷರತೆ’, `ರೋಗಗಳ ನಿಯಂತ್ರಣ ಮತ್ತು ತಡೆಗಟ್ಟುವಿಕೆ’, `ಕುಡಿಯುವ ನೀರು ಮತ್ತು ಸ್ವಚ್ಛತೆ’, `ಸಮಾಜದ ಆರ್ಥಿಕ ಅಭಿವೃದ್ಧಿ’,`ಮನೋಆರೋಗ್ಯ ಮತ್ತು ಮಕ್ಕಳ ಆರೋಗ್ಯ’, `ಪರಿಸರ ಕಾಳಜಿ’ ಮೊದಲಾದವು ಇವರ ಪ್ರಣಾಳಿಕೆಯಲ್ಲಿರುವ ಪರಿಪ್ರೇಕ್ಷಗಳು ಈ ಪಟ್ಟಿಯನ್ನು ಆದ್ಯತೆಯ ಮೇಲೆ ಅಳವಡಿಸಿಕೊಂಡು ತಮ್ಮ ಅನುಭವಿ ಸಮಾಜಸೇವಕರ ಮೂಲಕ ರೋಟರಿ ಕರ್ತವ್ಯ ನಿರ್ವಹಿಸುತ್ತಿದೆ ಎಂದರೆ ತಪ್ಪಿಲ್ಲ.
ಗೌರಿ ಓಝ ಅವರೆ ಹೇಳುವಂತೆ ಇಲ್ಲಿ ಹೆಂಗಸರು- ಗಂಡಸರು ಸಮಾನವಾಗಿ ತಮ್ಮ ಕಾರ್ಯಭಾರ ನಿರ್ವಹಿಸುತ್ತಾರೆ. ರೋಟರಿ ಸದಸ್ಯತ್ವ ಎಂಬುದು ಸಮಾಜದಲ್ಲಿನ ಪ್ರತಿಷ್ಟೆ ಎಂದೋ?, ಇಲ್ಲವೆ ಕಾಲಹರಣಮಾಡಲೆಂದೋ ಇರುವುದಲ್ಲ. ಯಾರಿಗೆ ಸಮಾಜಸೇವಾಸಕ್ತಿ ಇದ್ದು ಸಾಮಾಜಿಕ ವಲಯಗಳ ಬೇರೆ ಬೇರೆ ಸ್ತರಗಳಲ್ಲಿ ಅನುಭವವಿರುತ್ತದೆಯೋ ಅವರು ಮಾತ್ರ ರೋಟರಿ ಸದಸ್ಯತ್ವ ಪಡೆಯುವುದು ವಾಡಿಕೆ. ಅಧ್ಯಕ್ಷರು, ಕಾರ್ಯದರ್ಶಿಗಳು ,ಖಜಾಂಚಿ, ಸದಸ್ಯರು ಎಂಬಂತೆ ಈ ರೋಟರಿ ಸಂಸ್ಥೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತದೆ. ೧೯೮೯ರಲ್ಲಿ ಮಹಿಳಾ ಶಾಖೆಗಳು ಪ್ರಾರಂಭವಾಗಿದ್ದು ಇನ್ನರ್ವೀಲ್ಗಳು ಕೂಡ ಕಾರ್ಯನಿರ್ವಹಿಸುತ್ತಿವೆ.
ಹಾಗಂತ ರೋಟರಿ ಸಂಸ್ಥೆಯ ನೆರವು ವೈಯುಕ್ತಿಕವಾಗಿ ಲಭ್ಯವಾಗುವುದು ತೀರಾಕಡಿಮೆ ಆದರೆ ಕಮ್ಯುನಿಟಿ ಹಂತದಲ್ಲಿ ಲಭ್ಯವಾಗುತ್ತದೆ. ಪೂರ್ವನಿರ್ಧಾರಿತ ಕಾರ್ಯಯೋಜನೆಗಳನ್ನು, ಹಣಕಾಸು ಯೋಜನೆಗಳನ್ನು ರೂಪಿಸಿಕೊಂಡು ವ್ಯಸ್ಥಿತವಾಗಿ ಸಮಾಜಮುಖಿಯಾಗಿ ಕೆಲಸ ನಿರ್ವಹಿಸತ್ತಿದ್ದಾರೆ. ಇವರ ಸಾರ್ಥಕ ಕಾರ್ಯಕ್ರಮಗಳು ಹತ್ತು ಹಲವು.
ಸೌರಶಕ್ತಿಯನ್ನು ಉಪಯೋಗ ಮಾಡಿಕೊಳ್ಳುವ ಕಾರ್ಯಕ್ರಮಗಳ ಪ್ರವರ್ತಕರಾಗಿರುವ ಸೆಲ್ಕೋ ಕಂಪೆನಿ ಸಹಯೋಗದೊಂದಿಗೆ ವಿದ್ಯುತ್ ಅನಿಮಿಯತತೆಯನ್ನು ಎದುರಿಸುತ್ತಿದ್ದ ರಾಜ್ಯದ ಪ್ರಾಥಮಿಕಾರೋಗ್ಯ ಕೇಂದ್ರಗಳಿಗೆ ಸೌರಉಪಕರಣಗಳನ್ನು ಅಳವಡಿಸಿರುವುದು ಪ್ರಮುಖ ಮೈಲಿಗಲ್ಲು . .ಹದಿಹರೆಯದ ಹೆಣ್ಣುಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಗರ್ಭಕೊರಳಿನ ಕ್ಯಾನ್ಸರ್ ಕುರಿತು ಹೆಣ್ಣು ಮಕ್ಕಳ ಪೋಷಕರನ್ನೂ ಒಳಗೊಂಡಂತೆ ಅರಿವು ಮೂಡಿಸಿ ಆಗಬಹುದಾದ ತೊಂದರೆಗಳನ್ನು ತಡೆಗಟ್ಟಲು ಲಸಿಕಾ ಕಾರ್ಯಕ್ರಮವನ್ನು ಸರಕಾರದ ಸಹಭಾಗಿತ್ವದೊಂದಿಗೆ ಹಮ್ಮಿಕೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ .
ಮಂಗಳಮುಖಿಯರಿಗ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹೊಲಿಗೆ ತರಬೇತಿ ನೀಡಿ ಹೊಲಿಗೆಯಂತ್ರ ವಿತರಣೆ ಮಾಡಿರುವುದು, ಹೊಟೇಲ್ ಉದ್ಯಮ ಸ್ಥಾಪಿಸಲು ನೆರವಾಗಿರುವುದು ಇವರ ಪ್ರಶಂಸಾರ್ಹ ಕೆಲಸಗಳಲ್ಲೊಂದು. ಪ್ರಸ್ತುತ ಸಮಾಜ ಮಾದಕವ್ಯಸನ ಸಮಸ್ಯೆಯಿಂದ ಬಳಲುತ್ತಿದೆ ಈ ಕುರಿತಾದ ಜಾಗೃತಿಯನ್ನು ರೋಟರಿ ಕಿರಿಯ ಸದಸ್ಯ ಶಾಖೆ ರೊಟರ್ಯಾಕ್ ಮೂಲಕ ಅರಿವು ಮೂಡಿಸುತ್ತಿರುವುದು, ಐಟಿ, ಬಿಟಿ ಉದ್ಯಮ ಬೃಹದಾಕಾರವಾಗಿ ಬೆಳೆದಿರುವ ಇಂದಿನ ದಿನಮಾನಗಳಲ್ಲಿ ಕೌಶಲ್ಯಾಧರಿತ ಉದ್ಯೋಗ ತರಬೇತಿಗಳನ್ನು ಅಂದರೆ ಹೊಲಿಗೆ, ಪ್ಲಂಬಿಂಗ್ ಮುಂತಾದ ಕೆಲಸಗಳಿಗೆ ಯಶಸ್ವಿ ತರಬೇತು ನೀಡುತ್ತಿರುವುದು ಇವರ ಯಶಸ್ವಿಕಾರ್ಯಕ್ರಮಗಳಲ್ಲಿ ಒಂದಾಗಿದೆ. ಪರಿಸರಕ್ಕೆ ಸಂಬಂಧ ಪಟ್ಟಂತೆ ಬತ್ತಿ ಹೋಗಿದ್ದ ಪಾಲಾರ್ ನದಿ ವಲಯದ ಸುಮಾರು ೫೦೦ ಎಕರೆ ಪ್ರದೇಶದಲ್ಲಿ ಒಂದು ಲಕ್ಷ ಸಸಿಗಳನ್ನು ನೆಟ್ಟು ಹಸಿರು ವಲಯವನ್ನಾಗಿ ಮಾಡಿರುವುದು ಇವರ ಹೆಗ್ಗಳಿಕೆಯೇ ಸರಿ.
ಕಾಲಕಾಲಕ್ಕೆ ಹೆಂಗಸರು ಮತ್ತು ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡುವುದು, ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡುವುದು, ಗರ್ಭಕೊರಳಿನಂತ ಮಾರಣಾಂತಿಕ ರೋಗಗಳ ಬಗ್ಗೆ ಅರಿವು ಮೂಡಿಸುವುದು,ಹೃದ್ರೋಗಿಗಳಿಗೆ ಕ್ವಚಿತ್ತಾಗಿ ನೆರವು ನೀಡುವುದು ಮುಂತಾದವುಗಳನ್ನು ಆದ್ಯತೆಯ ಪ್ರಕಾರ ನಡೆಸಿಕೊಂಡು ಬರುತ್ತಿದ್ದಾರೆ ಇವರ ಮುಖ್ಯ ಧ್ಯೇಯ ಹೆಂಗಸರು ಮಕ್ಕಳ ಆರೋಗ್ಯ, ಶಿಕ್ಷಣ, ಆರ್ಥಿಕ ಸಬಲೀಕರವೇ ಅಗಿದೆ. ವಿಶ್ವಸಂಸ್ಥೆಯ ಕಾರ್ಯಯೋಜನೆಯ ಮುಖವಾಣಿಯಂತೆ ಕೆಲಸ ನಿರ್ವಹಿಸುತ್ತಿರುವ ರೋಟರಿ ಸಂಸ್ಥೆ ಶ್ರೀಮತಿ ಗೌರಿ ಓಝರ ಅಧ್ಯಕ್ಷತೆಯಲ್ಲಿ ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿ ಯಶಸ್ಸು ಕಾಣಲಿ ಎಂದು ಆಶಿಸೋಣ.
-ಸುಮಾವೀಣಾ ಹಾಸನ