ಹುಬ್ಬಳ್ಳಿ: ರಾಜ್ಯ ಭಾರತೀಯ ಜನತಾ ಪಕ್ಷದಲ್ಲಿ ಕಾಣಿಸಿಕೊಂಡಿರುವ ಗೊಂದಲಗಳು ಹಾಗೂ ಸಮಸ್ಯೆಗಳು ಶೀಘ್ರ ಬಗೆಹರಿಯಲಿವೆ ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಸಮಸ್ಯೆಗಳು ಇಲ್ಲವೆಂದಲ್ಲ. ಸಮಸ್ಯೆಗಳಿವೆ. ಶೀಘ್ರ ಬಗೆಹರಿಯಲಿವೆ ಎಂದಿದ್ದಾರೆ.ಎಲ್ಲಾ ಪಕ್ಷಗಳಲ್ಲೂ ಸಮಸ್ಯೆಗಳಿರುತ್ತವೆ. ಹಾಗೆಯೇ ನಮ್ಮ ಪಕ್ಷದಲ್ಲಿರುವ ಸಮಸ್ಯೆಗಳನ್ನು ಪಕ್ಷದ ರಾಷ್ಟ್ರೀಯ ವರಿಷ್ಠರು ಬಗೆಹರಿಸುತ್ತಾರೆ. ಪಕ್ಷದ ವರಿಷ್ಠರು ಇದುವರೆಗೂ ದೆಹಲಿ ವಿಧಾನಸಭಾಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಬಿಜೆಪಿ ರಾಜ್ಯ ಪಕ್ಷದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ.
ಸಮಸ್ಯೆ ಬಗೆಹರಿಸುವ ಸಂಬಂಧ ಪಕ್ಷದ ವರಿಷ್ಠರು ತಮ್ಮನ್ನು ಸಲಹೆ ಕೇಳಿದರೆ ನೀಡುತ್ತೇನೆ ಎಂದಿರುವ ಅವರು, ಎಲ್ಲಾ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರೆಯಲಿದೆ.ಪಕ್ಷದ ಲಿಂಗಾಯತ ನಾಯಕರು ಸಭೆ ಸೇರಿ ಸಮಾಲೋಚನೆ ನಡೆಸಿದ್ದಾರೆ ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿ ಈಬಗ್ಗೆ ತಮಗೇನು ತಿಳಿಯದು ಎಂದು ಹೇಳಿದ್ದಾರೆ.