ಕಳೆದ ಕೆಲವು ವರ್ಷಗಳಿಂದ ಪ್ರಸಾದನ ಕಲಾವಿದರಾಗಿ ಗುರುತಿಸಿಕೊಂಡಿರುವ ದಿನೇಶಾಚಾರ್ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವವರು. ಪ್ರಸ್ತುತ ಅವರು “ಉದಾಹರಣೆ” ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಭೂಮಿಕ ಮೂವೀಸ್ ಲಾಂಛನದಲ್ಲಿ ಹೇಮಾವತಿ ದಿನೇಶಾಚಾರ್ ನಿರ್ಮಾಣ ಮಾಡಿದ್ದಾರೆ.
ಈ ಚಿತ್ರ ಅಕ್ಟೋಬರ್ 18 ರಂದು ತೆರೆಗೆ ಬರಲಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.ನಾನು ವಸ್ತ್ರಾಲಂಕಾರ ಕಲಾವಿದನಾಗಿ, ಪ್ರಸಾದನ ಕಲಾವಿದನಾಗಿ ಹಾಗು ಸಹ ನಿರ್ದೇಶಕನಾಗಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ನಿರ್ದೇಶಕನಾಗಿ ಇದು ಮೊದಲ ಚಿತ್ರ. ಮೂರು ಮತ ಬಾಂಧವರ ಮೂರು ಕುಟುಂಬಗಳಲ್ಲಿ ನಡೆಯುವ ಕಥೆಯೇ “ಉದಾಹರಣೆ”. ಮಕ್ಕಳಿಗೆ ಹಾಗೂ ಹಿರಿಯರಿಗೆ ಉತ್ತಮ ಸಂದೇಶ ನೀಡುವ ಕಥಾಹಂದರ ನಮ್ಮ ಚಿತ್ರದಲ್ಲಿದೆ. ಅಕ್ಟೋಬರ್ 18 ರಂದು ಚಿತ್ರ ತೆರೆಗೆ ಬರಲಿದೆ.
ಶ್ರೀಗುರು ಸಂಗೀತ ನಿರ್ದೇಶನ, ಅಣಜಿ ಪ್ರಕಾಶ್ ಛಾಯಾಗ್ರಹಣ ಹಾಗೂ ಸಂಜೀವ ರೆಡ್ಡಿ ಸಂಕಲನ ಈ ಚಿತ್ರಕ್ಕಿದೆ. ಸುಧಾ ಬೆಳವಾಡಿ, ರಾಧಾ ರಾಮಚಂದ್ರ, ನೆ ಲ ನರೇಂದ್ರಬಾಬು, ನೆ ಲ ಮಹೇಶ್ ಬಾಬು, ಅಪ್ಪು ವೆಂಕಟೇಶ್, ಖುಷಿ, ನಂದಿನಿ, ಪ್ರಿನ್ಸ್ ಶರತ್, ಅನುಷ ಜೈನ್, ಶ್ರೀಮತಿ, ಸುರೇಶ್, ಮಂಜು, ಶ್ರೀನಿವಾಸ್ ಸೇರಿದಂತೆ ನಲವತ್ತೆಂಟಕ್ಕೂ ಅಧಿಕ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಾನೇ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ ಮಾಡಿದ್ದೇನೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ದೇಶಕ ದಿನೇಶಾಚಾರ್.
ಹಲವು ವರ್ಷಗಳಿಂದ ದಿನೇಶಾಚಾರ್ ನನಗೆ ಪರಿಚಯ. ಚಿತ್ರ ಮಾಡುತ್ತೇನೆ ಎಂದಾಗ ಮೊದಲು ಬೇಡ ಅಂದೆ. ಆನಂತರ ಈ ಚಿತ್ರ ಕಥೆ ಹೇಳಿದರು. ಇಷ್ಟವಾಯಿತು. ಅವರ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದು ಕಾರ್ಯಕಾರಿ ನಿರ್ಮಾಪಕ ರವಿಶಂಕರ್ ತಿಳಿಸಿದರು.ಚಿತ್ರದಲ್ಲಿ ಅಭಿನಯಿಸಿರುವ ಅಪ್ಪು ವೆಂಕಟೇಶ್, ನೆ ಲ ಮಹೇಶ್ ಬಾಬು, ಖುಷಿ, ಪ್ರಿನ್ಸ್ ಶರತ್ ಮುಂತಾದ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರದ ಕುರಿತು ಮಾತನಾಡಿದರು.