ನಾಗಪುರ: ಜನಸಂಖ್ಯೆಯ ಬೆಳವಣಿಗೆ ಇಳಿಮುಖವಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಸಮುದಾಯದ ಉಳಿವಿಗಾಗಿ ಕನಿಷ್ಠ 3 ಮಕ್ಕಳನ್ನಾದರೂ ಪಡೆಯಬೇಕು ಎಂದು ಹೇಳಿದ್ದಾರೆ.
ಇಂದು ನಾಗ್ಪುರದಲ್ಲಿ ನಡೆದ ‘ಕಥಲೆ ಕುಲ್(ಕುಲ) ಸಮ್ಮೇಳನ’ದಲ್ಲಿ ಮಾತನಾಡಿದ ಭಾಗವತ್, ಕುಟುಂಬಗಳ ಪ್ರಮುಖ ಪಾತ್ರವನ್ನು ಎತ್ತಿ ತೋರಿಸಿದರು ಮತ್ತು ಜನಸಂಖ್ಯಾಶಾಸ್ತ್ರದ ಅಧ್ಯಯನಗಳ ಪ್ರಕಾರ, ಸಮುದಾಯದ ಒಟ್ಟು ಫಲವತ್ತತೆಯ ಪ್ರಮಾಣ(ಜನಸಂಖ್ಯೆ) 2.1 ಕ್ಕಿಂತ ಕಡಿಮೆಯಾದರೆ, ಅದು ಅಳಿವಿನಂಚಿಗೆ ಹೋಗಬಹುದು ಎಂದು ಎಚ್ಚರಿಸಿದರು.
ಜನಸಂಖ್ಯೆಯ ಬೆಳವಣಿಗೆ ಇಳಿಕೆಯಾಗುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ. ಸಮಾಜದ ಒಟ್ಟು ಫಲವತ್ತತೆಯ ದರ 2.1 ಕ್ಕಿಂತ 2.1 ಕ್ಕಿಂತ ಕಡಿಮೆಯಾದರೆ, ಆ ಸಮಾಜವು ಭೂಮಿಯಿಂದ ಕಣ್ಮರೆಯಾಗುತ್ತದೆ ಎಂದು ಆಧುನಿಕ ಜನಸಂಖ್ಯಾ ವಿಜ್ಞಾನವೇ ಹೇಳುತ್ತದೆ. ಈಗಾಗಲೇ ಈ ರೀತಿಯಲ್ಲಿ ಅನೇಕ ಭಾಷೆಗಳು ಮತ್ತು ಸಮಾಜಗಳು ಅಸ್ತಿತ್ವವನ್ನು ಕಳೆದುಕೊಂಡಿವೆ. ಹಾಗಾಗಿ ಜನಸಂಖ್ಯೆಯು 2.1 ಕ್ಕಿಂತ ಕಡಿಮೆ ಇರಬಾರದು ಎಂದು ಹೇಳಿದರು.
ಜನಸಂಖ್ಯೆಯು 2.1 ಜನನ ಪ್ರಮಾಣಕ್ಕಿಂತ ಕಡಿಮೆ ಇರಬಾರದು. ಭಾರತದ ಜನಸಂಖ್ಯಾ ನೀತಿಯನ್ನು 1998 ಅಥವಾ 2002 ರಲ್ಲಿ ನಿರ್ಧರಿಸಲಾಯಿತು. ಯಾವುದೇ ಸಮಾಜದ ಜನಸಂಖ್ಯೆಯು 2.1 ಕ್ಕಿಂತ ಕಡಿಮೆಯಾಗಬಾರದು ಎಂದು ಅದರಲ್ಲಿ ಹೇಳಲಾಗಿದೆ ಎಂದರು.
ಇನ್ನು ಭಾಗವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು, ಮುಸ್ಲಿಂ ಮಹಿಳೆಯರು ಹೆಚ್ಚು ಮಕ್ಕಳನ್ನು ಪಡೆಯುತ್ತಾರೆ ಎಂದು ಪ್ರಧಾನಿ ಮೋದಿ ಈ ಹಿಂದೆ ಹೇಳಿದ್ದರು. ಅಲ್ಲದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ತಾಯಂದಿರ ಮತ್ತು ಹೆಣ್ಣುಮಕ್ಕಳ ಮಂಗಳಸೂತ್ರ ಸೇರಿದಂತೆ ಜನರ ಚಿನ್ನವನ್ನು ಕಸಿದುಕೊಂಡು ಮುಸ್ಲಿಮರಿಗೆ ಹಂಚುತ್ತಾರೆ ಎಂದು ಹೇಳಿದ್ದರು ಎಂದರು.
ಈಗ ಹೆಚ್ಚು ಮಕ್ಕಳನ್ನು ಹುಟ್ಟುಹಾಕಿ ಎನ್ನುತ್ತಾರೆ ಭಾಗವತ್. ಈಗ ಆರ್ಎಸ್ಎಸ್ನಲ್ಲಿರುವವರು ಮದುವೆಯಾಗಲು ಆರಂಭಿಸಬೇಕು ಎಂದು ಓವೈಸಿ ಹೇಳಿದ್ದಾರೆ.