ಸಕ್ಕರೆ ನಾಡು ಮಂಡ್ಯದಲ್ಲಿ ಜರುಗಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆಯಾಗಿರುವ ಗೊ. ರೊ. ಚೆನ್ನಬಸಪ್ಪ ಅವರ ಆಯ್ಕೆಯ ಹಿಂದಿನ ಲೆಕ್ಕಾಚಾರಗಳು ಒಂದೊಂದಾಗಿ ಬಯಲಾಗುತ್ತಿವೆ.ಸಮ್ಮೇಳನ ಜರುಗುತ್ತಿರುವ ಸ್ಥಳದ ಆಯ್ಕೆಯಿಂದ ಹಿಡಿದು ಸಮ್ಮೇಳನಾಧ್ಯಕ್ಷರ ಆಯ್ಕೆಯು ಕೂಡಾ ಒಂದು ಹಂತದಲ್ಲಿ ಗೊಂದಲದ ಗೂಡಾಗಿತ್ತು.ಕ್ರಮೇಣ ಪರಿಷತ್ತಿನ ಆಂತರಿಕ ಒಳಜಗಳವು ಕೂಡಾ ಬೂದಿ ಮುಚ್ಚಿದ ಕೆಂಡದಂತಾಗಿತ್ತು .
ಒಂದು ಕಡೆ ಮಂಡ್ಯ ಶಾಸಕರು ಇತರೆ ಜನಪ್ರತಿನಿಧಿಗಳು ಕೂಡಾ ಮುಖ್ಯಮಂತ್ರಿಯವರೆಗೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರವರೆಗೂ ಇದಕ್ಕೆ ಸಂಬಂಧಪಟ್ಟಂತೆ ದೂರುಗುಳ ಸರಮಾಲೆ ಸುರಿದದ್ದು ಏನು ಮುಚ್ಚಿಟ್ಟ ಸತ್ಯಗಳೆನೂ ಅಲ್ಲ.ಒಂದು ಕಡೆ ಈವರೆಗೆ ಜರುಗಿರುವ 24 ಕಸಾಪ ಚುನಾವಣೆಗಳಲ್ಲಿ ದಾಖಲೆಯ ಅಂತರದಲ್ಲಿ ಗೆಲುವು ಸಾಧಿಸಿರುವ ಮಹೇಶ್ ಜೋಶಿ ತಾವು ಗೆದ್ದ ಹುಮ್ಮನಿಸ್ಸಿನಲ್ಲಿ ಅನೇಕ ವಿವಾದಗಳ ಜೊತೆ ಜೊತೆಗೆ ಪರಿಷತ್ತಿನ ನಿಭಂದನೆ ಕಟ್ಟಡ ವಿನ್ಯಾಸದಿಂದ ಹಿಡಿದು ಭುವನೇಶ್ವರಿ ಮೂರ್ತಿಯ ಸ್ಥಾಪನೆ ಹೀಗೆ ಅನೇಕ ಸುಧಾರಣೆಗಳನ್ನು ತಂದಿದ್ದು ಕೂಡಾ ಗಮನಾರ್ಹ.
ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಕಸಾಪ ಸದಸ್ಯತ್ವದಿಂದ ಹಿಡಿದು ಸಮ್ಮೇಳನ ಸಂದರ್ಭದಲ್ಲಿ ಪ್ರತಿನಿಧಿ ನೋಂದಣಿ ಹೀಗೆ ಹೊಸ ಪ್ರಯೋಗಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಪರಿಷತ್ತಿನ ಗಡಿಯನ್ನು ದೇಶ ವಿದೇಶಗಳಿಗೆ ವಿಸ್ತರಿಸಿದ್ದು ಕೂಡಾ ದಾಖಲಾರ್ಹ. ಆದರೆ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಆಯ್ಕೆಗೊಂಡ ಕೆಲ ಜಿಲ್ಲಾ ಅಧ್ಯಕ್ಷರು ಹಾಗೂ ಗಡಿ ಭಾಗದ ಅಧ್ಯಕ್ಷರುಗಳನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಕೆಲವೊಂದು ಆಕ್ಷೇಪಗಳಿವೆ. ಅಷ್ಟೇ ಅಲ್ಲದೇ ತಾವೇ ನಾಮ ನಿರ್ದೇಶನ ಮಾಡಿಕೊಂಡ ಕಾರ್ಯಕಾರಿ ಸಮಿತಿಯ ಸದಸ್ಯರುಗಳನ್ನು ಕೂಡಾ ಕೇವಲವಾಗಿ ಮಾತನಾಡುವ ಪರಿಯೂ ಕೂಡಾ ಚರ್ಚೆಗೆ ಗ್ರಾಸವಾಗಿದೆ.
ಕಸಾಪದಂತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯನ್ನು 1915 ರಲ್ಲಿ ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರು ಸ್ಥಾಪನೆ ಮಾಡಿದ್ದು ಇತಿಹಾಸ. ಬಹುಷಃ ಒಂದು ಭಾಷೆಯನ್ನು ಪ್ರತಿನಿಧಿಸುವ ಅದೂ ಲಕ್ಷಾಂತರ ಸದಸ್ಯರನ್ನು ಹೊಂದಿರುವ ದೇಶದ ಏಕೈಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು.ಸರ್. ಎಂ. ವಿಶ್ವೇಶ್ವರಯ್ಯನವರು ಕೂಡಾ ಸದರಿ ಸಂಸ್ಥೆ ಸ್ಥಾಪನೆಗೊಳ್ಳುವಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ. ಎನ್. ಬಸವರಾಧ್ಯ ಡಾ. ಸಿದ್ದಲಿಂಗಯ್ಯ ಹಂಪಾನಾ ಹೀಗೆ ಒಬ್ಬೊಬ್ಬ ಅಧ್ಯಕ್ಷರ ಅವಧಿಯಲ್ಲಿ ಅವರದೇ ಇತಿ ಮಿತಿಯಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ. ಅದೇ ಸಾಲಿಗೆ ಸೇರುತ್ತಾರೆ ಈಗ ಮಂಡ್ಯದಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಗೊ. ರೊ. ಚೆನ್ನಬಸಪ್ಪ ನವರು ಕೂಡಾ. ಗೊ. ರೊ. ಚೆನ್ನಬಸಪ್ಪ ಅವರು ಕೂಡಾ ಕಸಾಪ ಗೌರವ ಕಾರ್ಯದರ್ಶಿ ಯಾಗಿ ಅಧ್ಯಕ್ಷರಾಗಿ ತಮ್ಮದೇ ಶೈಲಿಯಲ್ಲಿ ಕೆಲಸ ಮಾಡಿ ತೋರಿಸಿದ್ದಾರೆ.ಶ್ರೀಯುತರು ಚಿಕ್ಕಮಗಳೂರು ಜಿಲ್ಲೆಯ ಒಂದು ಪುಟ್ಟ ಗ್ರಾಮದಲ್ಲಿ ಕಡು ಬಡತನದಲ್ಲಿ ಕಷ್ಟ ಪಟ್ಟು ತಮ್ಮ ಸ್ವ ಪ್ರಯತ್ನನಿಂದ ಬೆಳೆದು ನಿಂತಿದ್ದೇ ರೋಚಕ ಇತಿಹಾಸ.
ಕೇವಲ ಕಸಾಪ ಅಷ್ಟೇ ಅಲ್ಲದೇ ಜಾನಪದ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿಗೂ ಬೇರೆಯದೆ ಸ್ವರೂಪ ತಂದು ಕೊಟ್ಟ ಹೆಗ್ಗಳಿಕೆ ಚೆನ್ನಬಸಪ್ಪನವರದು. ಕಳೆದ ಕೆಲ ವರುಷಗಳ ಹಿಂದೆ ಚಿತ್ರನಟ ದರ್ಶನ್ ಅವರ ಅಭಿಮಾನಿಗಳು ಮಾಡಿದ ಕೆಲಸದಿಂದ ದರ್ಶನ್ ಹುಟ್ಟುಹಬ್ಬದ ದಿನದಂದು ಪಟಾಕಿ ಸಿಡಿಸಿದ್ದರಿಂದ ಕಿವಿಗೆ ಜೋರಾದ ಶಬ್ದ ಹೊಡೆದ ಪರಿಣಾಮ ಕಿವುಡತನವನ್ನು ಅಮಾಯಕವಾಗಿ ಆಸ್ವಾದಿಸುವಂತಾಯಿತು ಗೊ. ರು. ಚೆನ್ನಬಸಪ್ಪನವರು.ಚೆನ್ನಬಸಪ್ಪನವರು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಮಾಡಿದ ಕೆಲಸಗಳು ಇಂದಲ್ಲ ಎಂದೆಂದಿಗೂ ಅಜರಾಮರ.
ಈಗ ಮಂಡ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯಲ್ಲೂ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರ ಜಾಣ ನಡೆಯೂ ಕೂಡಾ ಗಮನಾರ್ಹ.
ಕಸಾಪದ ಒಟ್ಟು 63 ಕಾರ್ಯಕಾರಿ ಸಮಿತಿಯ ಸದಸ್ಯರಲ್ಲಿ 35 ಸದಸ್ಯರುಗಳು ಮಾತ್ರ ಆಯ್ಕೆಗೊಂಡವರು. ಇನ್ನುಳಿದ 28 ಸದಸ್ಯರುಗಳು ರಾಜ್ಯಾಧ್ಯಕ್ಷರಿಂದ ನಾಮ ನಿರ್ದೇಶನಗೊಂಡವರು. ಇದರಲ್ಲಿ ವಿಶ್ವವಿದ್ಯಾಲಯ ಸಂಘಸಂಸ್ಥೆ ಹೀಗೆ ವಿವಿಧ ವಲಯವನ್ನು ಪ್ರತಿನಿಧಿಸುವವರು.ಆದರೆ ಈವರೆಗೆ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಕಸಾಪ ರಾಜ್ಯಾಧ್ಯಕ್ಷರೇ ಬಹುತೇಕ ಸಮ್ಮೇಳನದ ಸರ್ವಾಧ್ಯಕ್ಷರುಗುಳ ಆಯ್ಕೆಯಲ್ಲಿಪ್ರಮುಖ ಪಾತ್ರವಹಿಸುತ್ತಾ ಬಂದಿರುವುದು. ಆದರೆ ಈ ಬಾರಿ ಯಾಕೋ ಕಾರ್ಯಕಾರಿ ಸಮಿತಿ ಸದಸ್ಯರುಗಳು ಅದರಲ್ಲೂ ಕೆಲ ಜಿಲ್ಲಾ ಅಧ್ಯಕ್ಷರುಗಳು ಒಟ್ಟಾಗಿ ಈ ಬಾರಿಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನುತ್ತಾವೇ ಕೆಲ ಬಲ್ಲ ಮೂಲಗಳು. ಒಂದು ಕಡೆ ಕೆಲ ಕಸಾಪ ಜಿಲ್ಲಾ ಅಧ್ಯಕ್ಷರುಗಳು ಬೆಂಗಳೂರಿನ ಮೆಜೆಸ್ಟಿಕ್ ಗೆ ಹೊಂದಿಕೊಂಡಂತಿರುವ ಖಾಸಗಿ ಹೋಟೆಲ್ ನಲ್ಲಿ ಸಮಾನ ಮನಸ್ಕರ ಸಭೆ ಸೇರಿ (ಬುಧವಾರ/ ಬೆಳಿಗ್ಗೆ) ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಗೆ ಪೂರ್ವಭಾವಿ ಎನ್ನುವಂತೆ ಚರ್ಚೆ ಆಗಿದ್ದು ಗೊ. ರೊ. ಚೆನ್ನಬಸಪ್ಪ ಅವರ ಆಯ್ಕೆಗೆ ಬುನಾದಿ ಆದಂತಾಗಿದೆ.
ಜೊತೆಗೆ ಮಹೇಶ್ ಜೋಶಿ ಅವರ ಮುಂದಾಲೋಚನೆಯು ಕೂಡಾ ಇಲ್ಲಿ ಕೆಲಸ ಮಾಡಿದೆ ಎನ್ನಬಹುದು. ಯಾಕೆಂದರೆ ಈವರೆಗೆ ಕೆಲ ಜಿಲ್ಲಾ ಅಧ್ಯಕ್ಷರುಗಳು ನೇರವಾಗಿ ಅಥವಾ ಪರೋಕ್ಷವಾಗಿ ರಾಜ್ಯ ಅಧ್ಯಕ್ಷರ ವಿರುದ್ಧ ಇದ್ದ ಅಸಮಾಧಾನವನ್ನು ಈ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯಲ್ಲಿ ತಮ್ಮ ಕೈ ಮೇಲಾಗುವಲ್ಲಿ ಯಶಸ್ಸು ಪಡೆದಿದ್ದಾರೆ ಎನ್ನಬಹುದು. ಇನ್ನೊಂದು ಕಡೆ ಕೆಲ ಜಿಲ್ಲಾ ಅಧ್ಯಕ್ಷರುಗಳೊಂದಿಗೆ ಇದ್ದ ಅಂತರವನ್ನು ಕಡಿಮೆ ಮಾಡಿಕೊಳ್ಳುವಲ್ಲಿ ರಾಜ್ಯ ಅಧ್ಯಕ್ಷರು ಯಶಸ್ಸು ಸಾಧಿಸಿಕೊಂಡಿದ್ದಾರೆ ಎನ್ನಬಹದು. ನಿನ್ನೆ (ಬುಧವಾರ) ಜರುಗಿದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಾಹಿತ್ಯ ಕ್ಷೇತ್ರದ ದಿಗ್ಗಜರುಗಳಾದ ವೆಂಕಟಾಚಲ ಶಾಸ್ತ್ರಿ ಕುಂವೀ ವೈದೇಹಿ ಮಾಲತಿ ಪಟ್ಟಣ ಶೆಟ್ಟಿ ಹೀಗೆ ಹಲವರ ಹೆಸರುಗಳು ಚರ್ಚೆಗೆ ಬಂದಿದ್ದವು ಎನ್ನಲಾಗಿದೆ.
ಒಂದು ಕಡೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆ ಎನ್ನುವಂತೆ ಮಹೇಶ್ ಜೋಶಿಯವರು ಪರಿಷತ್ತಿನ ಇತಿಹಾಸದಲ್ಲಿ ಮೊಟ್ಟ ಮೊದಲು ಎನ್ನುವಂತೆ ಸಮ್ಮೇಳನದ ಸರ್ವಾ ಧ್ಯಕ್ಷರ ಆಯ್ಕೆಗೆ ಹೆಸರು ಸೂಚನೆಗೆ ಕಳೆದ ಕೆಲ ವಾರಗಳ ಹಿಂದೆಯೇ ಕೆಲ ಹೆಸರುಗಳನ್ನು ಸಾರ್ವಜನಿಕವಾಗಿ ತೇಲಿ ಬಿಟ್ಟಿದ್ದರು. ತಮಗೆ ಈ ವ್ಯಕ್ತಿಯನ್ನೇ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡುತ್ತೇನೆ ಎಂದು ಬಹಿರಂಗವಾಗಿ ಹೆಸರನ್ನು ಹೇಳದಿದ್ದರೂ ಕೂಡಾ ಇಂತ ವ್ಯಕ್ತಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಳ್ಳಬಹುದು ಎನ್ನುವ ಸೂಚನೆ ನೀಡುತ್ತಾ ಬಂದರು. ಕೊನೆ ಕೊನೆಗೆ ತಾವು ಅಂದುಕೊಂಡ ವ್ಯಕ್ತಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಹಲವು ತಂತ್ರಗಳನ್ನು ಹೂಡುತ್ತಾ ಬಂದರು.
ಒಂದು ಕಡೆ ರಾಜಕೀಯ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಹೆಸರನ್ನು ಇನ್ನೊಂದು ಕಡೆ ಡಾ. ನಿರ್ಮಲಾನಂದಸ್ವಾಮಿಗಳ ಹೆಸರನ್ನು ಮತ್ತೊಂದು ಕಡೆ ಇನ್ಫೋಸಿಸ್ ಸುಧಾಮೂರ್ತಿಯವರ ಹೆಸರನ್ನು ಹಾಗೂ ವಿಜ್ಞಾನ ಕ್ಷೇತ್ರದ ಸಿ. ಎನ್. ಆರ್. ರಾವ್ ಅವರ ಹೆಸರನ್ನು ಹೀಗೆ ಕೆಲ ಹೆಸರುಗಳು ತೇಲಿ ಬಿಟ್ಟಿದ್ದರು ಮಹೇಶ್ ಜೋಶಿ.ಕೊನೆಗೆ ಮಾಧ್ಯಮಗಳಲ್ಲಿ ವಿರೋಧಗಳು ಹೆಚ್ಚಾದ್ದರಿಂದ ಜೊತೆಗೆ ಕಾರ್ಯಕಾರಿ ಸಮಿತಿಯ ಕೆಲ ಜಿಲ್ಲಾ ಅಧ್ಯಕ್ಷರುಗಳು ತಮ್ಮ ಆಯ್ಕೆಗೆ ವಿರೋಧ ವ್ಯಕ್ತವಾಗುತ್ತವೆ ಎನ್ನುವ ಸುಳಿವು ಅರಿತುಕೊಂಡು ಜಾಣ ನಡೆಯನ್ನು ಪ್ರದರ್ಶನ ಮಾಡಿಕೊಂಡ ರಾಜ್ಯಾಧ್ಯಕ್ಷರು ಅತ್ಯಂತ ಸೂಕ್ಷ್ಮವಾಗಿ 87ನೇ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಗೆ ಮುನ್ನುಡಿ ಹಾಡಿದ್ದಾರೆ.
ಇದರ ಜೊತೆಗೆ ಎರೆಡೆರುಡು ಬಾರಿ ಕಾರ್ಯಕಾರಿ ಸಮಿತಿಯ ಸಭೆಯನ್ನು ಮುಂದೂಡಿ ಕೊನೆಗೆ ನಿನ್ನೆ (ಬುಧವಾರ)ಜರುಗಿದ ಸಭೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಪ್ರಕ್ರೀಯೆಗೆ ಇತಿಶ್ರೀ ಹಾಡಿದ್ದಾರೆ ಮಹೇಶ್ ಜೋಶಿ. ಒಂದು ಹಂತದಲ್ಲಿ ಈ ವಿಷಯಕ್ಕೆ ಸಂಭಂದಪಟ್ಟಂತೆ ಮುಖ್ಯಮಂತ್ರಿಗಳ ಸಲಹೆ ಪಡೆದುಕೊಳ್ಳಲು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣ ಹಾಗೂ ಕಾವೇರಿ ಎರಡು ಕಡೆಗಳಲ್ಲಿ ಕಾರ್ಯಕಾರಿ ಸಮಿತಿಯ ಸಭೆಗೂ ಒಂದು ದಿನ ಮುಂಚಿತವಾಗಿ (ಮಂಗಳವಾರ) ಮಹೇಶ್ ಜೋಶಿ ಅವರು ಎಡ ತಾಕಿದರು ಹಾಗೂ ಕೊನೆಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ನೋಡಿ ಜೋಶಿ ಅವರೇ ಕನ್ನಡ ಭಾಷೆ ನಾಡು ನುಡಿಗೆ ಸೇವೆ ಸಲ್ಲಿಸಿದ ಯಾವುದೇ ವ್ಯಕ್ತಿಯನ್ನು ಆಯ್ಕೆ ಮಾಡಿ ಇಂತ ವ್ಯಕ್ತಿ ಆಗಬೇಕು ಎಂದು ನಾನೇಕೆ ಹೇಳಲಿ..? ಕಸಾಪ ಸಂವಿಧಾನದಂತೆ ನೀವು ನಿಮ್ಮ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಿ.
ನಮ್ಮ ಸರ್ಕಾರದಿಂದ ಏನು ಸಹಾಯ ಸಹಕಾರ ಬೇಕೋ ಅದು ಇದ್ದೇ ಇರುತ್ತೆ ಎಂದು ಮುಖ್ಯಮಂತ್ರಿಗಳು ಹೇಳಿದರು ಎಂದು ಗೊತ್ತಾಗಿದೆ.ಹೀಗೆ ಮಂಡ್ಯದಲ್ಲಿ ಡಿಸೆಂಬರ್ 20/21/22 ರಂದು ಜರುಗಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯ ಕೆಲಸ ಸುಸೂತ್ರವಾಗಿ ನಡೆದಿದೆ. ಇದಾದ ನಂತರ ನಿನ್ನೆ (ಬುಧವಾರ) ಕನ್ನಡದ ಆದಿಕವಿ ಹೆಸರಿನಲ್ಲಿರುವ ಬೆಂಗಳೂರಿನ ಪಂಪಮಹಾಕವಿ ರಸ್ತೆಯಲ್ಲಿರುವ ಕಸಾಪ ಕೇಂದ್ರಕಚೇರಿಯಲ್ಲಿ ಬೆಳಿಗ್ಗೆಯಿಂದ ಜರುಗಿದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಧ್ಯಾಹ್ನ ಮೂರು ಗಂಟೆವರೆಗೂ ಜರುಗಿದ ಬೇರೆ ಬೇರೆ ಚರ್ಚೆಯ ಜೊತೆಗೆ ಸಮ್ಮೇಳನದ ಸಾರ್ವಾಧ್ಯಕ್ಷರ ಆಯ್ಕೆಗೆ ಚಾಲನೆ ನೀಡಿದ ಕಸಾಪ ರಾಜ್ಯಾಧ್ಯಕ್ಷರು ಅಂತಿಮವಾಗಿ ಸರ್ವ ಸಮ್ಮತ ಸಮ್ಮೇಳನ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಇನ್ಮೇಲೆ ಕನ್ನಡದ ಮನಸುಗಳು ಬರುವ ಡಿಸೆಂಬರ್ 20 ರಿಂದ ಮೂರು ದಿನಗಳ ಕಾಲ ಮಂಡ್ಯದ ಕಡೆಗೆ ಚಲಿಸುವುದಂದೆ ಬಾಕಿ.