ಬೆಂಗಳೂರು: ನಗರದಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜೀವನ್ ಭೀಮಾ ನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಕೆಎಫ್ಸಿ ಜಂಕ್ಷನ್ ಬಳಿ ನಿನ್ನೆ ನಡೆದಿದೆ.
ಬೆಳಿಗ್ಗೆ 11.15 ರ ಸುಮಾರಿಗೆ ಇಂದಿರಾನಗರದ 6 ನೇ ಕ್ರಾಸ್ನಿಂದ ಕೆಎಫ್ಸಿ ಜಂಕ್ಷನ್ ಕಡೆಗೆ ವೇಗವಾಗಿ ಬಂದ ಐಷಾರಾಮಿ ಕಾರು ದ್ವಿಚಕ್ರ ವಾಹನಕ್ಕೆ ಹಿಂಭಾಗದಿಂದ ಡಿಕ್ಕಿ ಹೊಡೆದಿದೆ. ಬಳಿಕ ಹೆಚ್ಚಿನ ಹಾನಿ ತಪ್ಪಿಸುವ ಸಲುವಾಗಿ ಚಾಲಕ ವಾಹನವನ್ನು ಬಲಕ್ಕೆ ತಿರುಗಿಸಿದ್ದಾನೆ. ಈ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಾರಿನಲ್ಲಿದ್ದ ಅಪ್ರಾಪ್ತ ಬಾಲಕ ಸೇರಿದಂತೆ ಮೂವರಿಗೆ ಗಾಯಗೊಂಡಿದೆ.
ಘಟನೆ ಬಳಿಕ ಸ್ಥಳೀಯರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೂರು ವಾಹನಗಳನ್ನು ವಶಪಡಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.