ಬೆಳಗಾವಿ: ಸಿಎಂ ನಿದ್ದೆರಾಮಯ್ಯ ಆಗಿದ್ದಾರೆ, 12 ತಿಂಗಳ ಅವಧಿಯಲ್ಲಿ 17 ಅವಾಂತರಗಳನ್ನು ಸರ್ಕಾರ ತೋರಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.ಬೆಳಗಾವಿಯಲ್ಲಿ ಮಾಧ್ಯಮದವರೊಂ ದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು 18 ತಿಂಗಳು ಕಳೆದಿವೆ. 17 ತಿಂಗಳಾದರೂ ಸರ್ಕಾರ ಏನೂ ಅಭಿವೃದ್ಧಿ ಮಾಡಿಲ್ಲ.
ಆದರೆ 17 ತಿಂಗಳಲ್ಲಿ 17 ಅವಾಂತರಗಳನ್ನು ಸರ್ಕಾರತೋರಿಸಿದೆ. ಸಿದ್ದರಾಮಯ್ಯ ಕಳೆದ ಬಾರಿಯ ಆಡ ಳಿತವನ್ನು ಕೊಡುತ್ತಿಲ್ಲ. ಈ ಬಾರಿ ಸಿದ್ದರಾಮಯ್ಯ ಅವರೇ ಮುಡಾದಲ್ಲಿ ಸಿಲುಕಿ ನರಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಇದೀಗ ನಿದ್ದೆರಾಮಯ್ಯ ಆಗಿದ್ದಾರೆ. ಜೊತೆಗೆ ಸರ್ಕಾರವು ಕೂಡ ನಿದ್ದೆಯಲ್ಲಿದೆ. ಸಿಎಂಗೆ ಯಾವುದೇ ಇಲಾಖೆಗಳ ಮೇಲೆಯೂ ಹಿಡಿತ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಮುನ್ನೂರಕ್ಕೂ ಹೆಚ್ಚು ನವಜಾತ ಶಿಶುಗಳ ಸಾವಾಗಿದೆ. ಸಿದ್ದರಾಮಯ್ಯ ಹೊಸದಾಗಿ ಬಂದಾಗ ಪ್ರತಿ ತಿಂಗಳು ಜನತಾದರ್ಶನ ಮಾಡುತ್ತೇನೆ ಎಂದಿದ್ದರು. ಆದರೆ ಮಂತ್ರಿಗಳು ದುಡ್ಡು ಮಾಡುವುದರಲ್ಲಿ ಮುಳುಗಿದ್ದಾರೆ.ಜಿಲ್ಲೆಗಳಿಗೆ ಮಂತ್ರಿಗಳು ಭೇಟಿ ಕೊಡುತ್ತಿಲ್ಲ. ದುಡ್ಡು ಮಾಡಲು ಮಾತ್ರ ಜಿಲ್ಲೆಗಳಿಗೆ ಹೋಗುತ್ತಾರೆ. ಯಾವ ಮಂತ್ರಿಗಳು ಆಯಾ ಜಿಲ್ಲೆಗೆ ಹೋಗುತ್ತಿಲ್ಲ. ಇದು ಗುರುವಾರದ ಸರ್ಕಾರ, ಗುರುವಾರ ಮಾತ್ರ ಸಚಿವರು ವಿಧಾನಸೌಧಕ್ಕೆ ಬರುತ್ತಾರೆ. ಉತ್ತರ ಕರ್ನಾಟಕದ ಬಗ್ಗೆ ಸರ್ಕಾರ ಹೇಳಿದ್ದೇನು, ಮಾಡಿದ್ದೇನು? ಅತ್ಯಂತ ಕಳಪೆ ಸರ್ಕಾರ ಇದು. ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.