ಬೆಂಗಳೂರು: ಮೇ 23, 2025 ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಪೂರೈಸಲಿದ್ದು, ಈ ಸಂದರ್ಭದಲ್ಲಿ ಬೃಹತ್ ಸಮಾವೇಶವನ್ನು ನಡೆಸುವ ಮೂಲಕ ಎರಡು ವರ್ಷಗಳ ಪೂರೈಕೆಯ ಸಂಭ್ರಮಾಚರಣೆಯನ್ನು ನಡೆಸಲು ಕಾಂಗ್ರೆಸ್ ಪಕ್ಷದಲ್ಲಿ ಸಿದ್ಧತೆ ನಡೆದಿದೆ.
ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಸಂಪುಟ ಪುನರ್ ರಚನೆ ಮಾಡಲು ತಯಾರಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟ ಮುಂದುವರೆದಿದೆ. ಸಿಎಂ ತಮ್ಮ ಹುದ್ದೆಯನ್ನು ಉಳಿಸಿಕೊಳ್ಳಲು ಸಂಪುಟ ಪುನರ್ರಚನೆ ಆಯ್ಕೆ ಮಾಡಬಹುದು. ಅಕ್ಟೋಬರ್ 2025ಕ್ಕೆ ಅವರು ಸಿಎಂ ಆಗಿ ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸುವ ಮೊದಲು ಏನು ಬೇಕಾದರೂ ಆಗಬಹುದು ಎಂದು ಕಾಂಗ್ರೆಸ್ನ ಹಿರಿಯ ಶಾಸಕರೊಬ್ಬರು ಹೇಳಿದ್ದಾರೆ.
ಸಂಪುಟ ಪುನರಾಚನೆಗೆ ಹೈಕಮಾಂಡ್ ಅನುಮೋದಿಸಿದರೆ, ಸಿದ್ದರಾಮಯ್ಯ ತಮ್ಮ ಸಿಎಂ ಸ್ಥಾನ ಭದ್ರಪಡಿಸಿಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ. ಅವರು ಈಗಾಗಲೇ ಪಕ್ಷದ ಹೈಕಮಾಂಡ್ ಮತ್ತು ಶಿವಕುಮಾರ್ಗೆ ಪರೋಕ್ಷವಾಗಿ ಸಂದೇಶವನ್ನು ಕಳುಹಿಸಿದ್ದಾರೆ ಎನ್ನಲಾಗಿದೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮತ್ತು ಡಿಸಿಎಂ ಆಗಿ ಮುಂದುವರಿಯಲು ಅಭ್ಯಂತರವಿಲ್ಲ, ಅದರಲ್ಲಿ ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ ಸೇರಿದಂತೆ ಉತ್ತಮ ಖಾತೆ ಅವರ ಬಳಿಯಿವೆ. ತಮ್ಮ ಸಚಿವ ಸಂಪುಟದಿಂದ 15 ಸಚಿವರನ್ನು ಕೈಬಿಡಲು ಅವರು ಸಿದ್ಧರಿದ್ದಾರೆ, ಅವರಲ್ಲಿ ಕೆಲವರು ತಮ್ಮ ಬೆಂಬಲಿಗ ಸಚಿವರು ಇದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವು ಶಾಸಕರಿಗೆ ಸಚಿವರ ವಿರುದ್ಧ ಅಸಮಾಧಾನವಿದೆ, ಇದನ್ನೇ ನೆಪವಾಗಿಟ್ಟುಕೊಂಡು ಸಚಿವರನ್ನು ಸಂಪುಟದಿಂದ ಕೈಬಿಡಲು ಸಿಎಂ ಮುಂದಾಗಿದ್ದಾರೆ. ಇದು ಸೋಮವಾರ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಯಲ್ಲಿ ಸ್ಪಷ್ಟವಾಗಿತ್ತು.
ಸಚಿವರು ತಮ್ಮ ಪ್ರಸ್ತಾವನೆಗಳಿಗೆ ಸ್ಪಂದಿಸದಿರುವ ವಿಷಯವನ್ನು ಶಾಸಕರು ಬಹಿರಂಗವಾಗಿ ಪ್ರಸ್ತಾಪಿಸಿದರು. ಸಿದ್ದರಾಮಯ್ಯ ಅವರು ಸಚಿವರ ಬಗ್ಗೆ ಚಿಂತಿಸುತ್ತಿಲ್ಲ, ಬದಲಿಗೆ ಸಿಎಂ ಆಗಿ ಮುಂದುವರಿಯಲು ಶಾಸಕರ ಬೆಂಬಲ ಹೆಚ್ಚು ಮುಖ್ಯ ಎಂದು ಅವರು ಚಿಂತಿತರಾಗಿದ್ದಾರೆ ಎಂದು ಎಂಎಲ್ಸಿಯೊಬ್ಬರು ತಿಳಿಸಿದ್ದಾರೆ.ರಾಯಚೂರು ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮತ್ತು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ನಡುವೆ ಗಲಾಟೆ ನಡೆದಿದೆ.