ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಹಾಗೂ ನಗರ ವ್ಯಾಪ್ತಿಯ ಸಮಸ್ಯೆ ಕುರಿತಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು ಹಾಗೂ ಇತರೆ ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತರುವುದಕ್ಕೆ ಕಚೇರಿಗಳಿಗೆ ಅಲೆದಾಡುವ ಕೆಲಸ ತಪ್ಪಿಸುವ ಸಲುವಾಗಿ ಶಾಸಕ ಧೀರಜ್ ಮುನಿರಾಜ್ ಅವರು www.doddaballapura.com ಎಂಬ ವೆಬ್ ಸೈಟ್ ನ್ನು ಜಾರಿಗೆ ತಂದಿದ್ದಾರೆ.
ಈ ವೆಬ್ ಸೈಟ್ ನಲ್ಲಿ ಗ್ರಾಮ ಪಂಚಾಯಿತಿ ಹಾಗೂ ನಗರಸಭೆ ಅಧಿಕಾರಿಗಳ ಮಾಹಿತಿ ದೊರೆಯಲಿದೆ. ಈ ಮೂಲಕ ಕುಳಿತಲ್ಲೇ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಬಹುದು, ದೂರು ಸಹ ದಾಖಲು ಮಾಡಬಹುದಾಗಿದೆ ಎಂದು ಶಾಸಕ ಧೀರಜ್ ಮುನಿರಾಜ್ ತಿಳಿಸಿದರು.ತಾಲೂಕಿನ ಜನತೆ ಈ ವೈಬ್ ಸೈಟ್ನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತಾಲೂಕಿನ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಅಂಜನಾದ್ರಿ ಚಾರಿಟೇಬಲ್ ಟ್ರಸ್ಟ್ ಹಾಗೂ ಭಾರತೀಯ ಜನತಾ ಪಾರ್ಟಿ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪಾಯಿ ಅವರ ಸ್ಮರಣಾರ್ಥವಾಗಿ ಎಸ್ ಎಸ್ ಎಲ್ ಸಿ ಅಥವಾ ಪಿ ಯು ಸಿ ಯಲ್ಲಿ ಶೇಕಡಾ 80ಕ್ಕಿಂತಲೂ ಅಧಿಕ ಅಂಕಗಳನ್ನು ಗಳಿಸಿದ 1000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು.ಕಾರ್ಯಕ್ರಮವನ್ನು ಕುರಿತು ಶಾಸಕ ಧೀರಜ್ ಮುನಿರಾಜು ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಅಂಜನಾದ್ರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾಲೂಕಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರೋತ್ಸಾಹಧನವನ್ನು ವಿವಿಧ ದಿನಾಂಕಗಳಲ್ಲಿ ವಿತರಣೆ ಮಾಡಲಾಗುತ್ತಿತ್ತು. ಆದರೆ, ಈ ವರ್ಷದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪಾಯಿ ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಡಿಸೆಂಬರ್ 25 ರಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ನಿರ್ಧಾರಿಸಿದ್ದೇವೆ ಎಂದರು.
ಹತ್ತನೇ ತರಗತಿ ಮತ್ತು ಪಿಯುಸಿಯಲ್ಲಿ ಶೇಕಡಾ 80ಕ್ಕಿಂತ ಅಧಿಕ ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಕೊರೋನಾ ಸಂದರ್ಭದಲ್ಲಿ ಪ್ರಾರಂಭವಾದ ಈ ಪ್ರಕ್ರಿಯೆಯು ಇಂದು ಐದು ವರ್ಷಕ್ಕೆ ಕಾಲಿಟ್ಟಿದೆ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶುಲ್ಕ ಕಟ್ಟಲು ಆಗದ ವಿದ್ಯಾರ್ಥಿಗಳಿಗೆ ಈ ಪ್ರೋತ್ಸಾಹ ಧನವು ಅತ್ಯಂತ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಬಿಜೆಪಿ ಮುಖಂಡ ಹನುಮಂತರಾಯಪ್ಪ, ನಗರಸಭೆ ಅಧಕ್ಷೆ ಸುಮಿತ್ರಾ ಆನಂದ್, ಉಪಾಧ್ಯಕ್ಷ ಮಲ್ಲೇಶ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೀನಾರಾಯಣ್, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ, ಬಮುಲ್ ನಿರ್ದೇಶಕರಾದ ಬಿ.ಸಿ.ಆನಂದ್, ಮುದ್ದಣ್ಣ, ನಾಗೇಶ್, ಟಿ. ರಂಗರಾಜು, ನಗರಸಭಾ ಸದಸ್ಯ ಬಂತಿ ವೆಂಕಟೇಶ್, ನಾಗರತ್ನಮ್ಮ, ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಶಿಕಲಾ ನಾಗರಾಜ್, ಪುಷ್ಪ ಶಿವಶಂಕರ್, ವಾಣಿ ನಂದ ಕುಮಾರ್ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.