ವಿಜಯಪುರ: ಮೂವತ್ತು ವರ್ಷಗಳಿಂದ ಸರ್ಕಾರಿ ಗೋಮಾಳದಲ್ಲಿ ಮನೆಗಳು ಕಟ್ಟಿಕೊಂಡು ಜೀವನ ಮಾಡುತ್ತಿದ್ದು, ಸರ್ಕಾರಕ್ಕೆ ನಮೂನೆ 57, ಹಾಗೂ ಮನೆಗಳು ಕಟ್ಟಿಕೊಂಡಿರುವ ಜಾಗಗಳಿಗೆ 94 ಸಿ ಅರ್ಜಿ ಹಾಕಿಕೊಂಡಿದ್ದರೂ ಇದುವರೆಗೂ ಯಾರಿಗೂ ದಾಖಲೆಗಳು ಮಾಡಿಕೊಟ್ಟಿಲ್ಲ. ಕೆಲವರಿಗೆ ಮಾತ್ರ 9- 10ಮಾಡಿಕೊಟ್ಟು ಸೌಲಭ್ಯಗಳು ಕಲ್ಪಿಸಿಕೊಟ್ಟಿದ್ದಾರೆ. ಉಳಿದವರಿಗೆ ಗ್ರಾಮ ಪಂಚಾಯಿತಿಯಿಂದ ಅಗತ್ಯ ಮೂಲ ಸೌಕರ್ಯವನ್ನೂ ಒದಗಿಸಿಕೊಟ್ಟಿಲ್ಲ ಎಂದು ಬಿ.ಎಸ್.ಪಿ ಪಕ್ಷದ ತಾಲ್ಲೂಕುಅಧ್ಯಕ್ಷ ಮಲ್ಲೇಪುರ ಎಂ.ಡಿ.ರಾಮಾಂಜಿ ಬೇಸರ ವ್ಯಕ್ತಪಡಿಸಿದರು.
ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿ ಮಲ್ಲೇಪುರ ಗ್ರಾಮದಲ್ಲಿ ಸರ್ಕಾರಿ ಗೋಮಾಳ ಸರ್ವೆ ನಂಬರ್ 50 ಪಿ.1ರಲ್ಲಿ 16 ಎಕರೆ 34 ಗುಂಟೆ ಗೋಮಾಳವಿದ್ದು, ಮನೆಗಳು ನಿರ್ಮಾಣಮಾಡಿಕೊಂಡು ಮೂವತ್ತು ವರ್ಷಗಳಿಂದ 107 ಕುಟುಂಬಗಳವರು ಇಲ್ಲಿ ವಾಸವಾಗಿದ್ದಾರೆ. ಆದರೆ, ಕುಡಿಯುವ ನೀರು, ಬೀದಿದೀಪಗಳು, ಚರಂಡಿ ವ್ಯವಸ್ಥೆಯಾಗಲಿ, ರಸ್ತೆಯಾ
ಗಲಿ ಯಾವುದೂ ಮಾಡಿಕೊಟ್ಟಿಲ್ಲ. ಇಲ್ಲಿನ ಬಹುತೇಕರು ಭೂರಹಿತರೇ ಆಗಿದ್ದಾರೆ.
ಎಲ್ಲರೂ ಕೂಲಿ ಕೆಲಸಮಾಡಿಕೊಂಡು ಜೀವನ ಮಾಡುವವರಾಗಿದ್ದಾರೆ.ನಾವು ಹಲವಾರು ಬಾರಿ ಹೋರಾಟಗಳು ಮಾಡಿಕೊಂಡು ಬಂದಿದ್ದೇವೆ. ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿ ತಹಶೀಲ್ದಾರ್ ಅವರಿಗೂ ಮನವಿಗಳು ಕೊಟ್ಟದ್ದೇವೆ. ಅವರು ಇದುವರೆಗೂ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಇಲ್ಲಿರುವ ಎಲ್ಲರಿಗೂ ಹಕ್ಕುಪತ್ರಗಳನ್ನು ವಿತರಣೆ ಮಾಡಬೇಕು, ಅಗತ್ಯವಾಗಿರುವ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು.
ಅವರು ನಿರ್ಲಕ್ಷ್ಯವಹಿಸಿದರೆ ಉಗ್ರ ಹೋರಾಟಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಮಲ್ಲೇಪುರ ಗ್ರಾಮಸ್ಥರಾದ ಚಿಕ್ಕರಂಗಪ್ಪ, ಮುನಿರಾಜು, ಮಂಜುನಾಥ್, ರಾಜೇಶ್, ಮುನಿಆಂಜಿನಪ್ಪ, ಕೃಷ್ಣಪ್ಪ, ಮಂಜಮ್ಮ, ಮದ್ದೂರಪ್ಪ, ಸುಧಾಕರ್, ಸಂತೋಷ್, ತೇಜಸ್, ಮುಂತಾದವರು ಹಾಜರಿದ್ದರು.