ದೇವನಹಳ್ಳಿ: ತಾಲೂಕಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಿರ್ದೇಶಕರ ಒಟ್ಟು 59 ಸ್ಥಾನಕ್ಕೆ ಚುನಾವಣೆ ನಡೆದಿದ್ದು, 47 ಸ್ಥಾನಗಳು ವಿವಿಧ ಸರಕಾರಿ ಇಲಾಖೆಗಳ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದು ಉಳಿದ 12ಸ್ಥಾನಗಳಿಗೆ ಚುನಾವಣೆಯಲ್ಲಿ ಬಹುಮತದ ಮೂಲಕ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಜು ಸಬಾಸ್ಟಿನ್ ತಿಳಿಸಿರುತ್ತಾರೆ.
ದೇವನಹಳ್ಳಿ ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.ಐದು ಇಲಾಖೆಗಳಾದ ಆರೋಗ್ಯ, ಕಂದಾಯ, ಸರಕಾರಿ ಪದವಿ ಪೂರ್ವ ಕಾಲೇಜು ಆಡಳಿತ ಕಚೇರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ಕಚೇರಿ, ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆಗಳಿಂದ ಚುನಾವಣೆ ನಡೆಯಿತು.
ಆರೋಗ್ಯ ಇಲಾಖೆಯಿಂದ 7 ಸ್ಪರ್ಧಿಗಳು 3 ಸ್ಥಾನಕ್ಕೆ ಸ್ಪರ್ಧಿಸಿದ್ದು, ಅಭ್ಯರ್ಥಿ ಗಂಗಾಧರ್ 83 ಮತಗಳು, ನಾರಾಯಣಗೌಡ 66 ಮತಗಳು, ವೆಂಕಟೇಶ್ 83 ಮತಗಳು ಪಡೆದು ವಿಜೇತರಾಗಿರುತ್ತಾರೆ.
ಕಂದಾಯ ಇಲಾಖೆಯಿಂದ 3 ಸ್ಪರ್ದಿಗಳು 2 ಸ್ಥಾನಕ್ಕೆ ಸ್ಪರ್ದಿಸಿದ್ದು, ರಂಗನಾಥ್.ವಿ 55 ಮತಗಳು, ಹನುಮಂತರಾಯಪ್ಪ.ಕೆ 56 ಮತಗಳು ಪಡೆದು ವಿಜೇತರಾಗಿರುತ್ತಾರೆ. ಸರಕಾರಿ ಪದವಿ ಪೂರ್ವ ಕಾಲೇಜು ಆಡಳಿತ ಕಚೇರಿಗಳ ಚುನಾವಣೆಗೆ 2 ಸ್ಪರ್ದಿಗಳು 1 ಸ್ಥಾನಕ್ಕೆ ಸ್ಪರ್ದಿಸಿದ್ದು ಅಭ್ಯರ್ಥಿ ಬೈರೇಗೌಡ.ಬಿ.ಪಿ. 16 ಮತಗಳನ್ನು ಪಡೆದು ವಿಜೇತರಾಗಿರುತ್ತಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ಕಚೇರಿಯಿಂದ 3 ಸ್ಪರ್ಧಿಗಳು 1 ಸ್ಥಾನಕ್ಕೆ ಸ್ಪರ್ಧಿಸಿದ್ದು, ಪುನೀತ್.ಆರ್. 21 ಮತಗಳನ್ನು ಪಡೆದು ವಿಜೇತರಾಗಿರುತ್ತಾರೆ.
ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆ ಚುನಾವಣೆ ಬಹಳ ಕುತೂಹಲ ಮೂಡಿಸಿದ್ದು, 10 ಸ್ಪರ್ದಿಗಳು 5 ಸ್ಥಾನಕ್ಕೆ ಸ್ಪರ್ಧಿಸಿದ್ದು, ಅಭ್ಯರ್ಥಿಗಳಾದ ಆದರ್ಶ್.ಬಿ 344 ಮತಗಳು, ನಾಗೇಶ್.ಎಚ್.ಎನ್. 241 ಮತಗಳು, ನಾರಾಯಣ 246 ಮತಗಳು, ಮಂಜುನಾಥ್ 266 ಮತಗಳು, ಯತೀಶ್ ಕುಮಾರ್ 343 ಮತಗಳನ್ನು ಪಡೆಯುವುದರ ಮೂಲಕ ವಿಜೇತರಾಗಿರುತ್ತಾರೆ.
ನಿರ್ದೇಶಕರ ಚುನಾವಣೆಯಲ್ಲಿ ಆರೋಗ್ಯ ಇಲಾಖೆಯಿಂದ ಸ್ಪರ್ದಿಸಿದ್ದ ನಾರಾಯಣಗೌಡ ವಿರುದ್ಧ ಆಂಜಿನಮ್ಮ ಅಭ್ಯರ್ಥಿಗಳಿಗೆ ತಲಾ 66 ಮತಗಳು ಬಂದಿದ್ದರಿಂದ ಲಾಟರಿ ಮೂಲಕ ನಡೆಸುವ ಆಯ್ಕೆಯಲ್ಲಿ ನಾರಾಯಣಗೌಡ ಅವರು ವಿಜೇತರಾಗಿರುತ್ತಾರೆ. ಪ್ರಾಥಮಿಕ ಶಾಲಾ ಶಿಕ್ಷಣ ಚುನಾವಣೆಯಲ್ಲಿ ನಾಗೇಶ್.ಹೆಚ್.ಎನ್ ವಿರುದ್ಧ ಗಂಗಾಧರ್ ಅಭ್ಯರ್ಥಿಗಳಿಗೆ ಮತ ಎಣಿಕೆ ಸಂದರ್ಭದಲ್ಲಿ ತೊಡಕಾಗಿದ್ದರಿಂದ ಮರು ಎಣಿಕೆ ಮಾಡಲಾಯಿತು. ಮರು ಎಣಿಕೆಯಲ್ಲಿ ನಾಗೇಶ್.ಹೆಚ್.ಎನ್. ಅವರು 17 ಮತಗಳ ಅಂತರದಲ್ಲಿ ವಿಜೇತರಾಗಿರುತ್ತಾರೆ.ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಆರ್ ಎಚ್ ಎಂ .ಗಂಗಾಧರ್.ಪಿ ಸೇರಿದಂತೆ ತಾಲೂಕು ಮತ್ತು ಜಿಲ್ಲಾಮಟ್ಟದ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.