ಕೆ.ಆರ್.ಪೇಟೆ: ಗ್ರಾಮೀಣ ಪ್ರದೇಶದ ರೈತರ ನೆಮ್ಮದಿಯ ಜೀವನ ಹಾಗೂ ಮಹಿಳಾ ಸಬಲೀಕರಣಕ್ಕೆ ಸೌಹಾರ್ಧ ಸಹಕಾರಿ ಸಂಘಗಳು ಕಾಮಧೇನು, ಕಲ್ಪವೃಕ್ಷದಂತೆ ಕೆಲಸ ಮಾಡುತ್ತಿವೆ. ರೈತಾಪಿ ವರ್ಗದ ಜನರು ಸಹಕಾರ ಸಂಘಗಳಲ್ಲಿಯೇ ಹಣಕಾಸು ವ್ಯವಹಾರ ನಡೆಸುವ ಮೂಲಕ ಸಹಕಾರ ಚಳವಳಿಯ ಬಲವರ್ಧನೆಗೆ ಮುಂದಾಗಬೇಕು ಎಂದು ರಾಜ್ಯದ ಮಾಜಿ ಸಚಿವ ಡಾ.ನಾರಾಯಣಗೌಡ ಮನವಿ ಮಾಡಿದರು.
ಅವರು ಪಟ್ಟಣದ ಸುಭಾಷ್ನಗರ ಬಡಾವಣೆಯಲ್ಲಿರುವ ಕೆ.ಆರ್.ಪೇಟೆ ತಾಲೂಕು ಶ್ರೀ ಶಿವಜ್ಯೋತಿ ಗಾಣಿಗರ ಸೌಹಾರ್ಧ ಸಹಕಾರಿ ನಿಯಮಿತ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಉತ್ತಮ ವ್ಯವಹಾರ ಮಾಡಿದ ಸಹಕಾರಿಗಳು, ಶೇರುದಾರರು ಹಾಗೂ ಮಹಿಳಾ ಸಂಘಗಳ ಸದಸ್ಯೆಯರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ಸಹಕಾರ ಚಳುವಳಿಯು ದೇಶಾಧ್ಯಂತ ವ್ಯಾಪಿಸಿರುವುದರಿಂದ ಗ್ರಾಮೀಣ ಪ್ರದೇಶದ ರೈತರು ಹಾಗೂ ಮಹಿಳೆಯರಿಗೆ ಕಾಲ ಕಾಲಕ್ಕೆ ಸಾಲ ಸೌಲಭ್ಯ ಸೇರಿದಂತೆ, ಕೃಷಿ ಪರಿಕರಗಳು, ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರಗಳು ದೊರೆಯುತ್ತಿರುವುದರಿಂದ ರೈತರು ನೆಮ್ಮದಿಯಿಂದ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ. ಕಡಿಮೆ ದಾಖಲಾತಿಗಳನ್ನು ಪಡೆದುಕೊಂಡು ಸಂಕಷ್ಠದ ಸಮಯದಲ್ಲಿ ಸೌಹಾರ್ಧ ಸಹಕಾರಿ ಸಂಘಗಳು ಸಾಲ ಸೌಲಭ್ಯವನ್ನು ನೀಡುತ್ತಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಮೀಟರ್ ಬಡ್ಡಿ ದಂಧೆಯು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದ್ದು ಗ್ರಾಮೀಣ ಪ್ರದೇಶದ ರೈತರು ಹಾಗೂ ಮಹಿಳೆಯರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಿದೆ.
ಗ್ರಾಮೀಣ ಪ್ರದೇಶದ ಜನರು ತಾವು ಕಷ್ಟಪಟ್ಟು ಕೂಡಿಟ್ಟಿರುವ ಹಣವನ್ನು ಸಹಕಾರ ಸಂಘಗಳಲ್ಲಿಯೇ ಠೇವಣಿಯಿಡುವ ಜೊತೆಗೆ ನಮ್ಮ ಗ್ರಾಮಗಳಲ್ಲಿಯೇ ಇರುವ ಸಹಕಾರ ಸಂಘಗಳಲ್ಲಿಯೇ ಹಣಕಾಸು ವ್ಯವಹಾರವನ್ನು ನಡೆಸಬೇಕು. ಕೃಷಿ ಕೂಲಿಕಾರ್ಮಿಕರು ಹಾಗೂ ರಸ್ತೆ ಬದಿಯ ವ್ಯಾಪಾರಿಗಳು ದಿನವಹಿ ಪಿಗ್ಮಿ ಖಾತೆಗೆ ಹಣ ಜಮಾ ಮಾಡುವ ಮೂಲಕ ತಮ್ಮ ಸಂಕಷ್ಠಕ್ಕೆ ನೆರವಾಗಲು ಹಣ ಕೂಡಿಡಬೇಕು ಎಂದು ನಾರಾಯಣಗೌಡ ಮನವಿ ಮಾಡಿದರು.
ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಾರಂಗಿ ನಾಗಣ್ಣ ಮಾತನಾಡಿ ಕೆ.ಆರ್.ಪೇಟೆ ತಾಲೂಕು ಶ್ರೀ ಶಿವಜ್ಯೋತಿ ಗಾಣಿಗರ ಸೌಹಾರ್ಧ ಸಹಕಾರಿ ನಿಯಮಿತ ಸಂಘವು ಸ್ಥಾಪನೆಯಾದ 4 ವರ್ಷಗಳಲ್ಲಿಯೇ ಅತ್ಯುತ್ತಮವಾಗಿ ಮುನ್ನಡೆಯುತ್ತಿದ್ದು ಲಾಭಗಳಿಸಿದೆ. ರೈತಬಂಧುಗಳು ಶೇರುದಾರರಾಗಿ ಸಹಕಾರ ಸಂಘಗಳಲ್ಲಿಯೇ ವ್ಯವಹರಿಸುವ ಮೂಲಕ ಸಹಕಾರ ಸಂಘಗಳಿಗೆ ಚೈತನ್ಯ ಶಕ್ತಿ ನೀಡಬೇಕು ಎಂದು ಮನವಿ ಮಾಡಿದರು.
ಮಂಡ್ಯ ಜಿಲ್ಲಾ ಸೌಹಾರ್ಧ ಸಹಕಾರಿ ಒಕ್ಕೂಟದ ಅಧ್ಯಕ್ಷ ಗುರುರಾಜ್, ಉಪಾಧ್ಯಕ್ಷ ಸಿದ್ಧಲಿಂಗಯ್ಯ, ಭೈರವೇಶ್ವರ ಸೌಹಾರ್ಧ ಸಹಕಾರ ನಿಯಮಿತದ ಅಧ್ಯಕ್ಷ ವೆಂಕಟೇಶ್, ಜಿಲ್ಲಾ ಸೌಹಾರ್ಧ ಅಭಿವೃದ್ಧಿ ಅಧಿಕಾರಿ ಬಲರಾಮ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಗಿರೀಶ್, ಸಂಘದ ಉಪಾಧ್ಯಕ್ಷ ಸುರೇಶ್ ಮೋಧಿ, ಪಿಎಲ್ಡಿ ಬ್ಯಾಂಕ್ ಮಾಜಿಅಧ್ಯಕ್ಷ ಕಟ್ಟೇಕ್ಯಾತನಹಳ್ಳಿ ಪಾಪಣ್ಣ, ಪುರಸಭೆ ಮಾಜಿಸದಸ್ಯ ಕೆ.ವಿನೋದ್, ಸಂಘದ ಸಿಇಓ ಶಿಲ್ಪಾ, ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀಕಂಠಶೆಟ್ಟಿ, ಎ.ಸಿ.ರಾಜೇಶ್, ಎ.ಎನ್.ಪರಮೇಶ್, ಕೃಷ್ಣಮ್ಮ, ಭಾರತಿ, ಮಂಜುಶೆಟ್ಟಿ, ಡಿ.ಎಂ.ರೇವಣ್ಣ, ಸಿ.ಎಸ್.ಶಂಕರ್, ಎಸ್.ಕೆ.ರಾಮಯ್ಯ, ದೀಪು, ಲೇಖನಾ, ಅನಿತ, ನಂದಿತ, ಕಂಪ್ಯೂಟರ್ ಅಕೌಂಟೆಂಟ್ ಶಾಲಿನಿ, ಪಿಗ್ಮಿ ಸಂಗ್ರಹಕರಾದ ಸರೋಜ ಸೇರಿದಂತೆ ನೂರಾರು ಶೇರುದಾರರು ಹಾಗೂ ಸಹಕಾರಿ ಬಂಧುಗಳು ವಾರ್ಷಿಕ ಮಹಾ ಸಭೆಯಲ್ಲಿ ಭಾಗವಹಿಸಿದ್ದರು.