ದೇವನಹಳ್ಳಿ : ರಾಜ್ಯ ಸರ್ಕಾರದ ಮಂತ್ರಿಗಳಿಗೆ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಅಹವು ಬಾರಿ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿಗಳು ಸರ್ಕಾರ ರೈತಪರವಾಗಿದೆ ಎಂದು ಹೇಳುತ್ತಲೇ ಬಂದಿದ್ದು ಶೀಘ್ರ ಇತ್ಯರ್ಥಪಡಿಸುತ್ತೇವೆ ಎಂದು ತಿಳಿಸಿದ್ದರೂ ಕೆಐಎಡಿಬಿ ಅಧಿಕಾರಿಗಳು ಪದೇಪದೇ ರೈತರಿಗೆ ತೊಂದರೆ ನೀಡುತ್ತಿದ್ಧಾರೆ, ಅವರಿಗೆ ತಕ್ಕ ಪಾಠಕಲಿಸಬೇಕಿದೆ ಎಂದು ಭೂಸ್ವಾದೀನ ವಿರೋಧಿ ಹೋರಾಟ ಸಮಿತಿಯ ಪರವಾಗಿ ಕಾರಹಳ್ಳಿ ಶ್ರೀನಿವಾಸ್ ಅಧಿಕಾರಿಗಳ ನಡೆ ಬಗ್ಗೆ ಖಂಡನೆ ವ್ಯಕ್ತಪಡಿಸಿದರು.
ಅವರು ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಚನ್ನರಾಯಪಟ್ಟಣ ರೈತರ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಗೆ ಬೆಂಬಲ ವ್ಯಕ್ತಪಡಿಸಿ, ಮಾತನಾಡಿ ಸರ್ಕಾರದ ಹಲವು ಸಚಿವರು ರೈತರ ಪರವಾಗಿ ಮಾತನಾಡಿದ್ದರೂ ಭ್ರಷ್ಠ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿದ್ದಾರೆ, 1028ದಿನ ಕಳೆದರೂ ಯಾವುದೇ ತೀರ್ಮಾನ ನೀಡದಿರುವುದರಿಂದ ಇದೇ ತಿಂಗಳ 10ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೆಳಿಗ್ಗೆ 11ರಿಂದ ಹಲವಾರು ರೈತಪರ, ಕನ್ನಡಪರ, ದಲಿತಪರ ಸಂಘಟನೆಗಳೊಂದಿಗೆ ಸೇರಿ ವಿಧಾನಸೌಧ ಚಲೋ ಹಾಗೂ ಅನಿರ್ಧಿಷ್ಠಾವಧಿ ಧರಣಿ ಮಾಡಲಿದ್ದೇವೆ ಎಂದು ತಿಳಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಕಾಮ್ರೆಡ್ ಬಸವರಾಜ್ ಮಾತನಾಡಿ ಫೆ|| 10ರಿಂದ ಭೃಹತ್ ಪ್ರತಿಭಟನೆ, ಧರಣಿ, ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ಚನ್ನರಾಯಪಟ್ಟಣ ಹೋಬಳಿಯ 1777 ಎಕರೆ ಬಲವಂತದ ಭೂಸ್ವಾದೀನ ಕೈಬಿಡಬೇಕು ಎಂದು ಒತ್ತಾಯ ಮಾಡಲಿದ್ದೇವೆ, ಈ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಂತ 10ಸಾವಿರಕ್ಕೂ ಹೆಚ್ಚು ರೈತರು ಸೇರುವ ನಿರೀಕ್ಷೆಯಿದ್ದು ರಾಜ್ಯ ಮಟ್ಟದ ಭೂಸ್ವಾಧೀನ ವಿರೋಧಿ ಹೋರಾಟದ ರೈತರ ಸಭೆ ನಡೆಸಿ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರನ್ನು ಅವಮಾನಿಸಿದ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಈ ಕೂಡಲೇ ರಾಜಿನಾಮೆ ನೀಡಿ ರಾಜ್ಯ ಸರ್ಕಾರ ಭೂಸ್ವಾಧೀನವನ್ನು ಕೈಬಿಡಬೇಕು ಇಲ್ಲವಾದಲ್ಲಿ ಹಸಿರು ಸೇನೆ, ಕನ್ನಡಪರ ಸಂಘಟನೆ ಇನ್ನೂ ಹಲವಾರು ಸಂಘಟನೆಗಳು ಬೆಂಬಲದೊಂದಿಗೆ ಸುಮಾರು ರೈತ ಮಹಿಳೆಯರು ಸೇರಿದಂತೆ 5 ಸಾವಿರ ಹೋರಾಟಗಾರರು ಚನ್ನರಾಯಪಟ್ಟಣ ರೈತರಿಗೆ ಬೆಂಬಲಿಸಿ ಶಾಂತಿಯುತವಾಗಿ ನ್ಯಾಯಕ್ಕಾಗಿ ಹೋರಾಟ ಮಾಡಲಿದ್ದೇವೆ, ಭೂ ಸ್ವಾಧೀನ ಇದೇ ರೀತಿ ಮುಂದೆವರೆದರೆ ಮುಂದಿನ 20 ವರ್ಷಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಕೃಷಿ ಭೂಮಿ ಉಳಿಯುವುದಿಲ್ಲ ಇದರಿಂದ ಜನ ಜೀವನ ಅಸ್ತವ್ಯಸ್ತವಾಗಿ ಹಸಿವಿನಿಂದ ಸಾಯುವ ಪರಿಸ್ಥಿತಿ ಬರುತ್ತದೆ ಎಂದು ನಮ್ಮ ಭೂಮಿ ನಮ್ಮ ಹಕ್ಕು ಎಂದು ಅಗ್ರಹಿಸಿದರು.
ಚನ್ನರಾಯಪಟ್ಟಣ ಗ್ರಾಪಂ ಮಾಜಿ ಅಧ್ಯಕ್ಷ ಮಾರೇಗೌಡ, ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಮುಖಂಡ ನಲ್ಲಪ್ಪನಹಳ್ಳಿ ನಂಜಪ್ಪ, ದಸಂಸ ಮುಖಂಡ ಕಾರಹಳ್ಳಿ ಶ್ರೀನಿವಾಸ್, ಸಹ ಸಂಚಾಲಕರಾದ ಪ್ರಭಾ ಬೆಳವಂಗಲ, ರಾಮಕೃಷ್ಣ, ಪ್ರವೀಣ್ಕುಮಾರ್, ರಾಮೇಗೌಡ ರೈತ ಹೋರಾಟ ಮುಖಂಡರಾದ ತಿಮ್ಮರಾಯಪ್ಪ, ಪ್ರಮೋದ್, ರಮೇಶ್, ಬಚ್ಚೇಗೌಡ, ಮಂಜುನಾಥ್, ವೆಂಕಟೇಶ್ ಬಿದಲೂರು ರಮೇಶ್, ಅಶ್ವಥಪ್ಪ, ವೆಂಕಟರಮಣಪ್ಪ ಸೇರಿದಂತೆ ಹಲವಾರು ರೈತ ಹೋರಾಟಗಾರರು ಭಾಗವಹಿಸಿದ್ದರು.