ಚಿಕ್ಕಬಳ್ಳಾಪುರ : ನಗರ ಹೊರವಲಯ ಶಿಡ್ಲಘಟ್ಟ ರಸ್ತೆಯಲ್ಲಿರುವ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಇ ಕಾಮರ್ಸ್ ವಿದ್ಯಾರ್ಥಿಗಳು ಸೋಮವಾರ ಸಹಭೋಜನ ಮಾಡುವ ಮೂಲಕ ಮನಷ್ಯಜಾತಿ ತಾನೊಂದೇ ವಲಂ ಎಂಬ ಆದಿಕವಿ ಪಂಪನ ಮಾತಿಗೆ ಜೀವತುಂಬಿದರು.
ರಾಜ್ಯ ಶಿಕ್ಷಣ ನೀತಿಯ ಭಾಗವಾಗಿ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿಪ್ರಾರಂಭಿಸಿರುವ ಹೊಸ ಪದವಿ ಕೋರ್ಸ್ ಇ ಕಾಮಸ್ ವಿಭಾಗದ ವಿದ್ಯಾರ್ಥಿಗಳು ರಾಜ್ಯಕ್ಕೆ ಮಾದರಿಯಾಗುವ ರೀತಿಯ ಅಭ್ಯಾಸವನ್ನು ರೂಪಿಸಿಕೊಂಡು ಸುದ್ದಿಯಾಗಿದ್ದಾರೆ.ಸೃಷ್ಟಿಯ ವೈವಿಧ್ಯದಂತೆ ಸಂಘಜೀವಿಯಾದ ಮಾನವ ಆಧುನಿಕತೆಯ ಜಗತ್ತಿನಲ್ಲಿ ತನಗರಿವಿಲ್ಲದಂತೆಯೇ ಕೂಡಿಬಾಳುವ, ಹಂಚಿತಿನ್ನುವ, ಸೋದರತತ್ವ ಭಾವದಿಂದ ದೂರಸರಿಯುತ್ತಿದ್ದಾರೆ. ನಾಗರೀಕರಾಗಿ ನಾವೇ ಹೀಗೆ ಮಾಡುವುದು ಸರಿಯಲ್ಲ ಎಂದು ಭಾವಿಸಿದ ಈ ವಿದ್ಯಾರ್ಥಿಗಳು ನಾವೆಲ್ಲಾ ಒಂದೇ ಎಂದು ಹೇಳುವ ಬದಲಿಗೆ ಸಹಭೋಜನ ಎಂಬ ಕಾರ್ಯಕ್ರಮದ ಮೂಲಕ ಮಾನವತೆಗೆ ಜೀವತುಂಬಿದ್ದಾರೆ.
ಹೌದು ಎರಡನೇ ಸೆಮಿಸ್ಟರ್ನಲ್ಲಿ ವ್ಯಾಸಾಂಗ ಮಾಡುತ್ತಿರುವ ಇ ಕಾಮರ್ಸ್ ಪದವಿಯ 30 ಮಂದಿ ವಿದ್ಯಾರ್ಥಿಗಳು ಅವರ ಮನೆಯಿಂದ ತಂದಿರುವ ಆಹಾರವನ್ನು ಕುಲಗೋತ್ರ ಧರ್ಮಗಳ ಹಂಗಿಲ್ಲದೆ,ಶ್ರೇಷ್ಟತೆಯ ವ್ಯಸನವಿಲ್ಲದೆ ಸಹಪಾಠಿಗಳು, ಪ್ರಾಂಶುಪಾಲರು, ಉಪನ್ಯಾಸಕರೊಟ್ಟಿಗೆ ನೆಲದ ಮೇಲೆ ಕುಳಿತು ಪರಸ್ಪರ ಹಂಚಿಕೊಂಡು ತಿನ್ನುವ ಸಹಭೋಜನ ಮಹತ್ವವನ್ನು ನಾಗರೀಕ ಜಗತ್ತಿಗೆ ಸಾರುವ ಕೆಲಸ ಮಾಡಿರುವುದು ವಿದ್ಯಾರ್ಥಿ ಸಮೂಹದ ನಡುವೆ ಭಾರೀ ಪ್ರಶಂಸೆಗೆ ಕಾರಣವಾಗಿದೆ.
ಈ ಬಗ್ಗೆ ಮಾತನಾಡಿರುವ ಪ್ರಾಂಶುಪಾಲಜಿ.ಡಿ.ಚಂದ್ರಯ್ಯ ಮೊಬೈಲ್ ಎಂಬ ಮಾಯಾಲೋಕದ ನಡುವೆ ಕಳೆದುಹೋಗುತ್ತಿರುವ ಯುವ ಸಮೂಹದ ನಡುವೆ 12ನೇಶತಮಾನದಲ್ಲಿ ಬಸವಾದಿ ಶರಣರು ಮುನ್ನಡೆಸಿಕೊಂಡು ಬಂದಿದ್ದ ಸಹಭೋಜನ ಪರಿಪಾಠವನ್ನು ನಮ್ಮ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಮಾಡಿರುವುದು ತುಂಬಾ ಸಂತೋಷದ ವಿಚಾರ.ಪದವಿ ವಿದ್ಯಾರ್ಥಿಗಳ ಈ ಬಗೆಯ ಬೌದ್ಧಿಕ ಬೆಳವಣಿಗೆ ನಿಜಕ್ಕೂಸಮಾಜಕ್ಕೆ ಮಾದರಿ.
ಈತರದ ಕಾರ್ಯಕ್ರಮಗಳು ನಿತ್ಯನಿರಂತರವಾಗಿ ನಡೆಯಲಿ,ಮನುಷ್ಯ ಮನುಷ್ಯರನ್ನು ಅಂತಃಕರದಿಂದ ಅಪ್ಪಿ ಮುದ್ದಾಡಲಿ, ಆಮೂಲಕ ಜಾತಿಯ ರೋಗವನ್ನು ದೂರಮಾಡಲಿ ಎಂದು ಹಾರೈಸಿದರು.
ಇಂಗ್ಲೀಷ್ ಉಪನ್ಯಾಸಕ ನರಸಿಂಹಮೂರ್ತಿ ಮಾತನಾಡಿ ಅಧ್ಯಾಪಕರು ಕೇವಲಪಾಠಪ್ರವಚಗಳಿಗಷ್ಟೇ ಸೀಮಿತವಾಗುವ ಬದಲು ವಿದ್ಯಾರ್ಥಿಗಳಲ್ಲಿ ಜೀವನಮೌಲ್ಯಗಳನ್ನು ತಂಬುವ ಕೆಲಸ ಮಾಡಬೇಕಿದೆ.ಇಕಾಮರ್ಸ್ ವಿದ್ಯಾರ್ಥಿಗಳ ಸಹಭೋಜನ ಕಾರ್ಯಕ್ರಮ ಆದರ್ಶದ, ಪ್ರತಿಯೊಬ್ಬರೂ ಅನುಕರಣೆ ಮಾಡಬಹುದಾದ ಸ್ತುತ್ಯಾರ್ಹ ಕಾರ್ಯವಾಗಿದೆ.ಈಥರದ ವಿದ್ಯಾರ್ಥಿಗಳ ಸಂಖ್ಯೆ ಸಾಸಿರವಾಗಲಿ, ಮಹಿಳಾ ಕಾಲೇಜಿನ ಕೀರ್ತಿ ಜಗದಗಲ ಹಬ್ಬಲಿಎಂದರು.ಈ ವೇಳೆ ಅರ್ಥಶಾಸ್ತ್ರ ಪ್ರಾಧ್ಯಾಪಕ ಹರೀಶ್, ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕರಾದ ಅಶ್ವತ್ಥ್ನಾರಾಯಣ್,ಶಿವಾನಂದ್ಇಂಗ್ಲೀಷ್ ಪ್ರಾಧ್ಯಾಪಕ ಪ್ರೇಮಕುಮಾರ್,ಡಾ.ಪದ್ಮಕುಮಾರಿ, ಡಾ.ರಾಮಕೃಷ್ಣಪ್ಪ, ಕನ್ನಡ ಉಪನ್ಯಾಸಕ ಕೃಷ್ಣಮೂರ್ತಿ, ಮುನಿರಾಜು ಎಂ ಅರಿಕೆರೆ ಇದ್ದರು.