ಬೆಂಗಳೂರು: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಾಡಿನ ಸಾಂಸ್ಕೃತಿಕ ಚರಿತ್ರೆಯ ಭಾಗಗಳು, ಇವುಗಳು ಪತ್ರಿಕೆಗಳಲ್ಲಿ ವರದಿಯಾಗುತ್ತವೆ. ಹಲವು ಪತ್ರಿಕೆಗಳು ವಿಶೇಷ ಪುರವಣಿಗಳನ್ನೇ ತರುತ್ತವೆ. ಆದರೆ ಅದು ಅಂದಿನ ಸಂಭ್ರಮಕ್ಕೆ ಸೀಮಿತವಾಗಿ ಕ್ರಮೇಣ ಮರೆತೇ ಹೋಗುತ್ತದೆ. ಆದರೆ ಇದರ ಮಹತ್ವವವನ್ನು ಬಲ್ಲ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳೂ ಆಗಿರುವ ನೇ.ಭ.ರಾಮಲಿಂಗ ಶೆಟ್ಟರು. ಇಂತಹ ವರದಿಗಳನ್ನು ಜೋಡಿಸಿ ಪುಸ್ತಕ ರೂಪ ನೀಡುವ ಬಹು ಮುಖ್ಯ ಕಾರ್ಯ ನಡೆಸಿ ಕೊಂಡು ಬರುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಇಂದು ಸ್ನೇಹ ಬುಕ್ ಹೌಸ್ ಪ್ರಕಟಿಸಿರುವ ಹಿರಿಯ ಬರಹಗಾರರಾದ ನೇ.ಭ.ರಾಮಲಿಂಗ ಶೆಟ್ಟಿಯವರ ಪದ್ಮಶ್ರೀಡಾ.ದೊಡ್ಡರಂಗೇಗೌಡರು ಅಧ್ಯಕ್ಷರಾಗಿದ್ದ ಹಾವೇರಿಯ 86ನೆಯ ಅಖಿಒಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹ ಕೃತಿ `ಕನ್ನಡದ ರಥವನ್ನೇರಿದಾರೊ..’ ಮತ್ತು ಅವರ ಮೂರನೆಯ ಕವನ ಸಂಕಲನ `ಗವಾಕ್ಷಿ’ಯ ಬಿಡುಗಡೆ ಬಿಡುಗಡೆ ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣವನ್ನು ಮಾಡುತ್ತಿದ್ದರು.
ರಾಮಲಿಂಗ ಶೆಟ್ಟರ ಕಾವ್ಯ ಪ್ರೀತಿ ದೊಡ್ಡದು. ಅವರ `ಗವಾಕ್ಷಿ’ ಸಂಕಲನದ ಕವಿತೆಗಳ ವಸ್ತುವಿನ ವೈವಿಧ್ಯತೆ. ಸಮಕಾಲೀನ ತಲ್ಲಣ ಗಮನ ಸೆಳೆಯುವಂತಿದೆ , ಇದು ನಿಜಕ್ಕೂ ಸಂತೋಷ ನೀಡುವಂತಹ ಸಂಗತಿ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದರು.ಹಿರಿಯ ಜನಪದ ವಿದ್ವಾಂಸರು ಮತ್ತು 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೂ ಆದ ನಾಡೋಜ ಡಾ.ಗೊ.ರು.ಚನ್ನಬಸಪ್ಪನವರು ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡುತ್ತಾ ಕನ್ನಡದಲ್ಲಿ ದಾಖಲೀಕರಣದ ಕೊರತೆ ಇದೆ. ಸೃಜನಶೀಲ ಕೃತಿಗಳಿಗೆ ಸಿಕ್ಕುತ್ತಿರುವ ಮಹತ್ವ ಆಕರ ಗ್ರಂಥಗಳಿಗೆ ದೊರಕುತ್ತಿಲ್ಲ. ನೇ.ಭ.ರಾಮಲಿಂಗ ಶೆಟ್ಟರು ಸಮ್ಮೇಳನಾಧ್ಯಕ್ಷರ ಕುರಿತು ಕೃತಿಗಳನ್ನು ತರುವ ಮೂಲಕ ಈ ಕೊರತೆಯನ್ನು ಕೆಲಮಟ್ಟಿಗೆ ನೀಗಿಸುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಇಂತಹ ಕೃತಿ ಸಮ್ಮೇಳನದ ಸ್ವರೂಪವನ್ನು ಒಳಗೊಂಡರೆ ಉಪಯುಕ್ತವಾಗುತ್ತದೆ ಎಂದು ಸಲಹೆ ನೀಡಿದರು.
86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ.ದೊಡ್ಡರಂಗೇಗೌಡರು ಮಾತನಾಡಿ, ಕನ್ನಡ ವಿಶ್ವಾಮುಖಿಯಾಗಿ ಬೆಳೆಯುತ್ತಿದೆ. ಅದರ ಸಾಧ್ಯತೆಗಳನ್ನು ಹಿಡಿಯುವ ಕೆಲಸ ಸೂಕ್ತವಾಗಿ ಆಗುತ್ತಿಲ್ಲ. ಕನ್ನಡದ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕಾದ ಅಗತ್ಯ ಈಗ ಹೆಚ್ಚಾಗಿದೆ. ನೇ.ಭ.ರಾಮಲಿಂಗ ಶೆಟ್ಟರು ಒಂದು ಸಂಸ್ಥೆ ಮಾಡ ಬೇಕಾದ ಕೆಲಸವನ್ನು ವೈಯಕ್ತಿಕವಾಗಿ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿಶ್ಚಲಾನಂದನಾಥ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿ ನೇ.ಭ.ರಾಮಲಿಂಗ ಶೆಟ್ಟರ ಕ್ರಿಯಾಶೀಲತೆಯನ್ನು ಪ್ರಶಂಸಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕೃತಿಕಾರ ನೇ.ಭ.ರಾಮಲಿಂಗ ಶೆಟ್ಟಿಯವರು ಮತ್ತು ಪ್ರಕಾಶಕರಾದ ಕೆ.ಬಿ.ಪರಶಿವಪ್ಪನವರು ಕಾರ್ಯಕ್ರಮದಲ್ಲಿ ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಸ್ವಾಗತಿಸಿದರೆ ಬರಹಗಾರ ಲಕ್ಷ್ಮಿ ಶ್ರೀನಿವಾಸ್ ವಂದನಾರ್ಪಣೆಯನ್ನು ಮಾಡಿದರು. ಬರಹಗಾರ ಡಾ.ಸಿ.ಸಿ.ರಾಮಲಿಂಗೇಶ್ವರ ಕಾರ್ಯಕ್ರಮವನ್ನು ನಿರೂಪಿಸಿದರು.