ಬೆಳಗಾವಿ: ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ.ಕೃಷ್ಣ ಅವರು ಸಾಧಕ ಜೀವಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ್ಣಿಸಿದ್ದಾರೆ.
ವಿಧಾನಸಭೆಯಲ್ಲಿಂದು ಜಯಣ್ಣ ಮತ್ತು ಆರ್. ನಾರಾಯಣ ಅವರ ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡುತ್ತಿದ್ದ ಅವರು,ಕೃಷ್ಣ ಸಾಹೇಬರ ಬಗ್ಗೆ ಮಾತನಾಡಲು ನನಗೆ ಅವಕಾಶ ದೊರಕಲಿಲ್ಲ ಎಂದು ಭಾವದ್ವೇಗಗೊಂಡು ಮಾತು ಮುಂದುವರಿಸಿದ ಅವರ, ನನಗೆ ರಾಜಕೀಯದಲ್ಲೂ ಇದ್ದು, ಸಂಬಂಧಿಯೂ ಆಗಿದ್ದರು. ಒಂದು ರೀತಿಯಲ್ಲಿ ಕೃಷ್ಣ ಅವರ ಸಾವು ನನಗೆ ಸಂತೋಷವಾಗಿದೆ.
ಹೇಗೆಂದರೆ ಅವರ ಜೀವನ ಸಂಪೂರ್ಣ ಸಾರ್ಥಕವಾಗಿದ್ದು, ಸಾಧನೆಗಳನ್ನು ಮಾಡಿದ್ದಾರೆ. ಎಸ್.ಎಂ.ಕೃಷ್ಣ ಮತ್ತು ನನ್ನ ಸಂಬಂಧ ಎಲ್ಲರಿಗೂ ತಿಳಿದಿರುವುದೇ. ಅವರು ನನಗೆ ತಂದೆ ಸಮಾನರಾಗಿದ್ದರು. ರಾಜಕೀಯವಾಗಿ ಕೆಲವೊಂದು ಅವರ ನಡುವೆ ಭಿನ್ನಾಭಿಪ್ರಾಯಗಳಿದ್ದಿದ್ದು ನಿಜ. ಸಾಧನೆಯಿಲ್ಲದೆ ಸತ್ತರೆ ಸಾವಿಗೆ ಅವಮಾನ ಎನ್ನುವ ಹಾಗೆ ಹಲವಾರು ಸಾಧನೆಗಳನ್ನು ಮಾಡಿರುವ ಕೃಷ್ಣ ಅವರದ್ದು ಸಾಧಕ ಜೀವನ ಎಂದರು.
ರಾಜಕೀಯ ಜೀವನದಲ್ಲಿ ನನಗೂ ಅವರಿಗೂ ಭಿನ್ನಾಭಿ ಪ್ರಾಯಗಳು ಬರುತ್ತಿದ್ದವು.ಒಮ್ಮೆ ಅವರು ಮುಖ್ಯಮಂತ್ರಿಯಾದಾಗ ರಚಿಸಿದ ಮಂತ್ರಿಮಂಡಲದ ಪಟ್ಟಿಯಲ್ಲಿ ನನ್ನ ಮತ್ತು ಮೃತ ಜಯಣ್ಣ ಅವರ ಹೆಸರು ಇರಲಿಲ್ಲ. ಆ ಸಮಯದಲ್ಲಿ ಆಪ್ತ ಜ್ಯೋತಿಷಿ ಮಂತ್ರಿ ಪದವಿಯನ್ನು ಒದ್ದು ಪಡೆಯಿರಿ ಎಂದು ಸಲಹೆ ಮಾಡಿದ್ದರು. ಆಗ ನಾನು ಕೃಷ್ಣ ಅವರಿದ್ದ ಚೇಂಬರ್ಗೆ ಹೋಗಿ ಬಾಗಿಲು ತೆಗಿಸಿ ಮಂತ್ರಿಮಂಡಲ ಪಟ್ಟಿಗೆ ನನ್ನ ಹೆಸರು ಸೇರಿಸಲಾಯಿತು. ಆಗ ನನ್ನ ಜೊತೆಯಲ್ಲಿದ್ದ ಜಯಣ್ಣ ನಡುಗುತ್ತಿದ್ದರು ಎಂದಾಗ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್. ಅಶೋಕ್ ಈಗಲೂ ಸಿಎಂ ಪದವಿಯನ್ನು ಒದ್ದು ಪಡೆಯುತ್ತೀರಾ ಎಂದು ಶಿವಕುಮಾರ್ ಕಾಲೆಳೆದರು.