ಕನಕಪುರ: ತಾಲ್ಲೂಕು ಅಧಿಕಾರಿಗಳು ಸಾರ್ವಜನಿಕರ ಕುಂದು ಕೊರತೆಗಳಿಗೆ ಕೂಡಲೇ ಸ್ಪಂದಿಸಿ ಅವರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡುವಂತೆ ಜಿಲ್ಲಾಧಿಕಾರಿ ಯಶವಂತ್ ಗುರುಕಾರ್ ತಿಳಿಸಿದ್ದಾರೆ.
ಸೋಮವಾರ ನಗರಸಭಾ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಹೆಚ್ಚಾಗಿ ಅಲೆದಾಡುತ್ತಿರುವ ಬಗ್ಗೆ ವ್ಯಾಪಕ ದೂರಿದೆ ಈ ಇಲಾಖೆಯ ಕಂದಾಯ ನಿರೀಕ್ಷಕರು ಹಾಗೂ ಗ್ರಾಮಲೆಕ್ಕಿಗರು ಸಾರ್ವಜನಿಕ ಸಮಸ್ಯೆಗೆ ಹೆಚ್ಚಿನ ಹೊತ್ತು ನೀಡಬೇಕು ಇವರು ತಮ್ಮ ಕೇಂದ್ರ ಸ್ಥಾನಗಳಲ್ಲಿ ವಾಸವಿರಬೇಕು ಸಾರ್ವಜನಿಕರಿಂದ ಬರುವ ಅರ್ಜಿ ಗಳನ್ನು ಕೇಂದ್ರ ಸ್ಥಾನದಲ್ಲಿ ಪಡೆದು ಅವರ ಸಮಸ್ಯೆಗೆ ಸ್ಪಂದಿಸಬೇಕೆಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಕಾಡಾನೆಗಳ ಹಾವಳಿಯಿಂದ ಸಾವು ನೋವುಗಳು ಹೆಚ್ಚಾಗುತ್ತಿದೆ,ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳ ಚಲನವಲನಗಳ ಮೇಲೆ ನಿಗಾ ಇಡುವುದರ ಮೂಲಕ ಅವುಗಳನ್ನು ನಿಯಂತ್ರಿಸಿ ರೈತರ ಪ್ರಾಣ ಹಾಗೂ ಬೆಳೆ ರಕ್ಷಣೆಗೆ ಮುಂದಾಗಬೇಕೆಂದು ಸೂಚಿಸಿದರು. ರಾಜ್ಯವ್ಯಾಪಿ ಡೆಂಗ್ಯೂ ಜ್ವರ ವ್ಯಾಪಕವಾಗಿ ಹರಡುತ್ತಿದ್ದು ನಗರಸಭೆ,ಗ್ರಾಮ ಪಂಚಾಯಿತಿ ಅಧಿಕಾರಿ ಗಳು ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು, ತಾಲೂಕುಆರೋಗ್ಯ ಇಲಾಖೆ ಈ ರೋಗದ ಬಗ್ಗೆ ಮಾಹಿತಿ ಹಾಗೂ ಎಚ್ಚರದ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ತಿಳಿಸಿದರು.
ತಹಸಿಲ್ದಾರ್ ಸ್ಮಿತಾ ರಾಮು, ನಗರಸಭಾ ಆಯುಕ್ತ ಎಂ. ಎನ್. ಮಹಾದೇವ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮೋಹನ್ ಬಾಬು, ಡಿಡಿಎಲ್ಆರ್ ಹನುಮಪ್ಪ, ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಈ ವೇಳೆ ಹಾಜರಿದ್ದರು.