ಬೆಂಗಳೂರು: ಸಾಲಗಾರರ ಕಾಟ ಹಾಗೂ ಬೆದರಿಕೆಗೆ ಹೆದರಿ ಇಬ್ಬರು ವ್ಯಕ್ತಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ರಾಜಾಜಿನಗರ ಹಾಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.
ರಾಜಾಜಿನಗರದಲ್ಲಿ ಅರುಣ್ ಎಂಬ ಉದ್ಯಮಿ ಪೂಜಾ ಎಂಟರ್ಪೈಸೆಸ್ ದಿನೇಶ್ ಎಂಬುವರಿಂದ 6 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ನೀಡಿದ್ದ ದಿನೇಶ್ ಭದ್ರತೆಗಾಗಿ ಅರುಣ್ರಿಂದ ಕಾರು ಪಡೆದಿದ್ದರು. ಅರುಣ್ ಒಂದೂವರೆ ಲಕ್ಷ ರೂ. ಸಾಲ ತೀರಿಸಿ ಉಳಿಕೆ ಹಣ ನೀಡಲು ಕಾಲಾವಕಾಶ ಕೋರಿದ್ದರು ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡ ದಿನೇಶ್ ಅರುಣ್ ಅವರಿಗೆ ನಿಂದಿಸಿ ಧಮ್ಕಿ ಹಾಕಿದ್ದ ಪರಿಣಾಮ ನೊಂದ ಅರುಣ್ ಮನೆಯಲ್ಲಿ ಯಾರೂ ಇಲ್ಲದಾಗ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಅರುಣ್ ತಂದೆ ರಾಜಾಜಿನಗರ ಪೊಲೀಸ್ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ರಫೀಕ್ ಬಾಬು ಸಾಬ್(38) ಎಂಬಾತ ಪಿಕ್ಅಪ್ ವಾಹನ ಖರೀದಿಸಲು 6 ಲಕ್ಷ ರೂ. ಖಾಸಗಿ ವ್ಯಕ್ತಿಯಿಂದ ಸಾಲವನ್ನು ವಾರದ ಬಡ್ಡಿ ಮೇಲೆ ಪಡೆದಿದ್ದು, 6 ಲಕ್ಷ ರೂ. ತೀರಿಸಿದರೂ ಮತ್ತೇ 6 ಲಕ್ಷ ರೂ. ನೀಡಬೇಕು ಎಂದು ಒತ್ತಾಯಿಸಿದ ಪರಿಣಾಮ ಬೈಲಹೊಂಗಲದ ಮಾರುತಿ ಗಲ್ಲಿ ತನ್ನ ನಿವಾಸದ ಬಳಿ ತಾನೂ ಖರೀದಿಸಿದ ವಾಹನಕ್ಕೆ ರಫೀಕ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.