ಗುರು ಪೂರ್ಣಿಮೆ ದಿನದಂದು ಸಿಂಹ ರೂಪಿಣಿ ಚಿತ್ರದ ಪಾತ್ರಗಳ ಪರಿಚಯದ ಟೀಸರ್ ಬಿಡುಗಡೆ ಸಮಾರಂಭವು ಕಲಾವಿದರ ಭವನದಲ್ಲಿ ಅದ್ದೂರಿಯಾಗಿ ನಡೆಯಿತು. ವೇದಿಕೆ ಮೇಲೆ ಸಾಕ್ಷಾತ್ ಮಾರಮ್ಮ ದೇವಿ ಪ್ರತಿಷ್ಠಾಪನೆ, ಮಾವಿನ ಮತ್ತು ಬೇವಿನ ಎಲೆಯಿಂದ ಸಿಂಗಾರ ಗೊಳಿಸಿದ್ದು ವಿಶೇಷವಾಗಿತ್ತು.
ಕಿನ್ನಾಳ್ರಾಜ್ ಚಿತ್ರಕಥೆ-ಸಂಭಾಷಣೆ-ಸಾಹಿತ್ಯ ಹಾಗೂ ನಿರ್ದೇಶನ. ದೊಡ್ಡಬಳ್ಳಾಪುರ ಕೆ.ಎಂ.ನಂಜುಂಡೇಶ್ವರ ಕಥೆ ಬರೆದು ಶ್ರೀ ಚಕ್ರ ಫಿಲಿಂಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಆಕಾಶ್ಪರ್ವ ಸಂಗೀತ, ಕಿರಣ್ಕುಮಾರ್ ಛಾಯಾಗ್ರಹಣ, ವೆಂಕಿ.ಯುಡಿವಿ ಸಂಕಲನ, ಕಿಶೋರ್ ಕಲರಿಸ್ಟ್, ಸಾಹಸ ಥ್ರಿಲ್ಲರ್ಮಂಜು-ಚಂದ್ರು ಬಂಡೆ-ಮಂಜುನಾಗಪ್ಪ, ಸೌಂಡ್ ಎಫೆಕ್ಟ್ ನಂದು.ಜೆ ಇವರುಗಳ ಶ್ರಮದಿಂದ ಸಿದ್ದಗೊಂಡಿರುವ ೧.೪೫ ನಿಮಿಷದ ತುಣುಕುಗಳು ದೊಡ್ಡ ಪರದೆ ಮೇಲೆ ಅನಾವರಣಗೊಂಡಿತು.
ಪ್ಯಾನ್ ಇಂಡಿಯ ಸಂಗೀತ ಸಂಯೋಜಕ ರವಿಬಸ್ರೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ನಿರ್ದೇಶಕರು, ನಿರ್ಮಾಪಕರ ದೇವಿಯ ಮೇಲಿನ ಭಕ್ತಿ, ತಂತ್ರಜ್ಘರ ಕೆಲಸಗಳು ಚೆನ್ನಾಗಿ ಮೂಡಿಬಂದಿದೆ. ದೃಶ್ಯಗಳನ್ನು ನೋಡಿ ನನಗೆ ಆದಂತ ಕಂಪನ ಎಲ್ಲರಿಗೂ ಆಗಿದೆ ಅಂತ ಭಾವಿಸುತ್ತೇನೆ. ನನ್ನ ನಿರ್ದೇಶಕರ ಪಯಣ ಸುಮಾರು ೧೫ ವರ್ಷದಷ್ಟು ಹಳೆಯದು. ಇವರ ನಿರ್ದೇಶನದಲ್ಲಿ ನಾನು ಸಂಗೀತ ಕಂಪೋಸ್ ಮಾಡಬೇಕೆಂದು ಆ ಸಮಯದಲ್ಲಿ ಮಾತಾಡಿಕೊಂಡಿದ್ದೇವು. ಅಲ್ಲಿಂದ ಒಂದಷ್ಟು ಸಿನಿಮಾಗಳಲ್ಲಿ ನಾವಿಬ್ಬರು ಸೇರಿದ್ದೇವು. ಉದ್ಯಮದ ಬೆಳವಣಿಗೆಗೆ ಇಂತಹ ಪ್ರತಿಭೆಗಳ ಪಾತ್ರ ತುಂಬ ಅಗತ್ಯವಿದೆ ಎಂದರು.
ಕಾಟೇರ ಖ್ಯಾತಿಯ ಜಡೇಶ್ಕುಮಾರ್ ಪೋಸ್ಟರ್ ಬಿಡುಗಡೆ ಮಾಡಿದರು. ನಂತರ ಮಾತನಾಡುತ್ತಾ, ನಿರ್ದೇಶಕರು ನಮ್ಮ ಊರಿನ ಪಕ್ಕದವರು. ಪ್ರಾರಂಭದಿಂದಲೂ ಅವರ ಶ್ರಮವನ್ನು ನೋಡುತ್ತಾ ಬಂದಿದ್ದೇನೆ. ಚಿತ್ರದಲ್ಲಿ ನಮ್ಮ ಊರಿನ,ಭಾಗದ ಸಂಸ್ಕ್ರತಿಯನ್ನು ತೋರಿಸಲಾಗಿದೆ. ಅಂತಹ ಪ್ರಯತ್ನಗಳು ನಡೆದಾಗಲೇ ಮಾಹಿತಿಗಳು ಎಲ್ಲರಿಗೂ ತಿಳಿಯುತ್ತದೆ. ಮ್ಯೂಸಿಕ್ ಚೆನ್ನಾಗಿದೆ. ಕಾಟೇರ ಕೋಣ ಇಲ್ಲಿಗೆ ಯಾಕೆ ಬಂತು ಅಂತ ಕೇಳಿದೆ. ಸಿನಿಮಾ ನೋಡಿ ಅಂತಾರೆ. ನಿಮ್ಮಗಳ ಪ್ರಯತ್ನಕ್ಕೆ ಶುಭವಾಗಲಿ ಎಂದು ಹಾರೈಸಿದರು.
ಜೀವನದಲ್ಲಿ ನನ್ನ ಹೆಸರು ಟೈಟಲ್ ಕಾರ್ಡ್ದಲ್ಲಿ ಕಾಣಿಸಬೇಕೆಂದು ಆಸೆಪಟ್ಟವನು. ರವಿಬಸ್ರೂರು ಅಂಜನಿಪುತ್ರ ಸಿನಿಮಾಕ್ಕೆ ಹಾಡು ಬರೆಯಲು ಅವಕಾಶ ಮಾಡಿಕೊಟ್ಟರು. ನಂತರ ಕೆಜಿಎಫ್ನಿಂದ ಎಲ್ಲರೂ ಗುರುತು ಹಿಡಿಯುವಂತಾಯಿತು. ಈಗ ತಾಯಿ ಚಿತ್ರ ಮಾಡುತ್ತಿದ್ದೇನೆ. ಶೀರ್ಷಿಕೆ ಹೇಳುವಂತೆ ಶ್ರೀ ಮಾರಮ್ಮ ದೇವಿ ಕುರಿತಾಗಿದ್ದು, ಗ್ರಾಫಿಕ್ಸ್ ತಂತ್ರಜ್ಘಾನ ಇರುವುದು ವಿಶೇಷ. ಸಪ್ತ ಮಾತ್ರ್ರಿಕೆಯರ ವಿಷಯಗಳನ್ನು ಹೊಂದಿದ್ದು, ರಾಕ್ಷಸನನ್ನು ಸಂಹಾರ ಮಾಡಲು ಪಾರ್ವತಿದೇವಿ ಏಳು ಅವತಾರಗಳಲ್ಲಿ ಭೂಮಿಗೆ ಬರುತ್ತಾಳೆ. ಅದರಲ್ಲಿ ಕೊನೆಯದು ಶ್ರೀ ಮಾರಮ್ಮ ದೇವಿಯದು ಆಗಿರುತ್ತದೆ.
ತಾಯಿಯ ಮಹಿಮೆ,ಪವಾಡಗಳು, ಈಗಿನ ಟ್ರೆಂಡ್ಗೆ ತಕ್ಕಂತೆ ಕಮರ್ಷಿಯಲ್ ಅಂಶಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ನಿರ್ಮಾಪಕರ ಹುಟ್ಟಿದ ಹಬ್ಬ, ಗುರುಪೂರ್ಣೀಮೆ ಶುಭದಿನವಾಗಿದ್ದರಿಂದ ಕಾರ್ಯಕ್ರಮ ಏರ್ಪಾಟು ಮಾಡಲಾಗಿದೆ. ಚಿತ್ರದಲ್ಲಿ ೧೩೨ ಕಲಾವಿದರು ಅಭಿನಯಿಸಿದ್ದಾರೆ. ನಿರ್ಮಾಪಕರ ಕಥೆಗೆ ಚಿತ್ರರೂಪ ಕೊಟ್ಟಿದ್ದೇನೆ. ಹಾಡು ಬರೆಯಲು ಹೋದವನು, ಅಂತಿಮವಾಗಿ ನಿರ್ದೇಶನ ಮಾಡಲು ಹೇಳಿದ್ದೆ, ಇಲ್ಲಿಯ ತನಕ ತಂದು ನಿಲ್ಲಿಸಿದೆ. ಗ್ರಾಫಿಕ್ಸ್ ೧೫ ನಿಮಿಷದ ಕಾಲ ಬರುತ್ತದೆ. ಸದ್ಯ ಸಿಜಿ ನಡೆಯುತ್ತಿದ್ದು, ಕೋಣ ಯಾಕೆ ಇದೆ ಎಂಬುದು ಸಿನಿಮಾ ನೋಡಿದರೆ ತಿಳಿಯುತ್ತದೆಂದು ಕಿನ್ನಾಳ್ರಾಜ್ ಕುತೂಹಲ ಕಾಯ್ದಿರಿಸಿದರು.