ಬೆಂಗಳೂರು: ಇಂದಿನ ವಿಜ್ಞಾನ ಯುಗದಲ್ಲಿ ತಂತ್ರಜ್ಞಾನದ ಆವಿಷ್ಕಾರ, ಸಂಶೋಧನೆಗಳು ದೇಶದ ಅಭಿವೃದ್ಧಿ ಮತ್ತು ಮಾನವನ ವಿಕಾಸಕ್ಕೆ ಪ್ರಮುಖ ಕಾರಣವಾಗಿವೆ. ಇದಕ್ಕೆ ಪೂರಕವಾಗಿ ನಗರದ ಐಟಿಪಿಲ್ ರಸ್ತೆಯಲ್ಲಿರುವ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯ(ಸಿಎಂಆರ್ ಐಟಿ) “ಟೆಕ್ನೋ ಮೀಟ್ ಫಾರ್ ಸೊಸೈಟಿ” ಹೆಸರಿನ “ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಆಯೋಜಿಸಿತ್ತು.
ಸಿಎಂಆರ್ ವಿಶ್ವವಿದ್ಯಾಲಯ, ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯ, ಏಕ್ಯಾ ಸಮೂಹ ಶಾಲೆಗಳು ಸೇರಿದಂತೆ ಅನೇಕ ಕಾಲೇಜುಗಳ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಆಯೋಜನೆಗೊಂಡಿದ್ದ ಈ ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ, ಪ್ರಾತ್ಯಕ್ಷಿಕೆ ಎಲ್ಲರ ಗಮನ ಸೆಳೆಯಿತು.ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಸಿಇಓ ಮತ್ತು ಸಿಎಂಆರ್ ವಿವಿ ಪ್ರೊಚಾನ್ಸಲರ್ ಶ್ರೀ ಜಯದೀಪ್ ಕೆ.ಆರ್ ರೆಡ್ಡಿ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.
ಅನುಭವಿ ಪ್ರಾಧ್ಯಾಪಕರುಗಳು, ಸಂಶೋಧಕರುಗಳ ನೆರವಿನೊಂದಿಗೆ ವಿವಿಧ ವಿಭಾಗಗಳ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಂಶೋಧಿಸಿ ಆವಿಷ್ಕರಿಸಿದ ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯಲ್ಲಿ ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್, ದತ್ತಾಂಶ ವಿಜ್ಞಾನ, ಯಂತ್ರ ಕಲಿಕೆ, ಸಂಯೋಜಕ ಉತ್ಪಾದನೆ, ಎಲೆಕ್ಟ್ರಾನಿಕ್ಸ್ ಮತ್ತು ಮೂಲ ವಿಜ್ಞಾನಗಳಂತಹ ಕ್ಷೇತ್ರಗಳಲ್ಲಿನ ವೈವಿಧ್ಯಮಯ 18 ತಂತ್ರಾಂಶ ಮತ್ತು 16 ಯಂತ್ರಾಂಶ ಸೇರಿದಂತೆ ಒಟ್ಟು 34 ತಂತ್ರಜ್ಞಾನ ಆವಿಷ್ಕಾರಗಳು ಪ್ರದರ್ಶನಗೊಂಡವು.
ಕಾರ್ಯಕ್ರಮದಲ್ಲಿ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸಂಜಯ್ ಜೈನ್, ಉಪ ಪ್ರಾಂಶುಪಾಲ ಡಾ.ಬಿ.ನರಸಿಂಹ ಮೂರ್ತಿ, ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು.