ಬೆಂಗಳೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಕ್ರಮ ಸರಿಇದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು ಪ್ರಾಸಿಕ್ಯೂಷನ್ ಕ್ರಮ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ.
ಹೈಕೋರ್ಟ್ನಲ್ಲಿಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು, ಮುಡಾ ಹಗರಣದ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಕ್ರಮ ಸರಿಯಿದೆ ಎಂದು ತೀರ್ಪು ನೀಡಿದ್ದಾರೆ.ರಾಜ್ಯಪಾಲರ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.ಮುಡಾ ಪ್ರಕರಣದಲ್ಲಿ ಮುಖ್ಯ ಮಂತ್ರಿಯವರ ಕುಟುಂಬದವರೇ ಫಲಾನುಭವಿಗಳಾಗಿದ್ದಾರೆ.
ಹೀಗಾಗಿ ರಾಜ್ಯಪಾಲರು ಕೈಗೊಂಡಿರುವ ಕ್ರಮ ಸೂಕ್ತವಾಗಿದೆ ಎಂದು ಆದೇಶದಲ್ಲಿ ತಿಳಿಸಿರುವ ನ್ಯಾಯಮೂರ್ತಿಗಳು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ್ದ ಎಲ್ಲಾ ಅಂಶಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.ನ್ಯಾಯಮೂರ್ತಿಯವರು ಇಂದು ಪ್ರಕರಣದ ವಿಚಾರಣೆ ಸಂಬಂಧ ನಿಗಧಿಯಾಗಿದ್ದ 12ಗಂಟೆಗೆ ಸರಿಯಾಗಿ ನ್ಯಾಯಪೀಠದಲ್ಲಿ ಆಸಿನರಾಗಿ ತೀರ್ಪು ಪ್ರಕಟಿಸಿದರು.
ಈ ಸಂದರ್ಭದಲ್ಲಿ ಸಿಎಂ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನುಸಿಂಗ್ವಿ ಅವರು ವಿಡೀಯೋ ಕಾನ್ಪರೆನ್ಸ್ ಮುಖಾಂತರ ನ್ಯಾಯಾಲಯದ ಮುಂದೆ ಹಾಜರಾದರು.ತೀರ್ಪು ಪ್ರಕಟಣೆಗೂ ಮುನ್ನಾ ಇಂದು ಬೆಳಗ್ಗೆಯಿಂದ ಕಾವೇರಿ ನಿವಾಸದಲ್ಲೇ ಇದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 11 ಗಂಟೆಗೆ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ನಿಗಧಿಯಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಅಲ್ಲಿಂದ ತೆರಳುವ ವೇಳೆಗೆ ತೀರ್ಪು ಹೊರಬಿದ್ದಿತ್ತು. ಈ ಸಂದರ್ಭದಲ್ಲಿ ಸುದ್ದಿಗಾರರು ಪ್ರತಿಕ್ರಿಯೆ ಕೇಳಲು ಮುಂದದಾಗ ಆಮೇಲೆ ಉತ್ತರಿಸುತ್ತೇನೆ ಎಂದಷ್ಟೇ ಹೇಳಿ ಅಲ್ಲಿಂದ ತೆರಳಿದರು.