ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ತಾರಕಕ್ಕೇರಿರುವ ನಡುವಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಉಪಸ್ಥಿತಿಯಲ್ಲಿ ಕೆಪಿಸಿಸಿ ವಿಸ್ತೃತ ಸದಸ್ಯರ ಸಭೆ ಹಾಗೂ ಕಾಂಗ್ರೆಸ್ ಶಾಸಕಾಂಗ ಸಭೆ ಸೇರಿ ಸರಣಿ ಸಭೆಗಳು ಸೋಮವಾರ ನಡೆಯಲಿವೆ.
ಪ್ರತ್ಯೇಕ ಡಿನ್ನರ್ ಸಭೆ, ಅಧಿಕಾರ ಹಂಚಿಕೆ ಕುರಿತ ಬಹಿರಂಗ ಹೇಳಿಕೆ, ಜಾತಿಗಣತಿ ಮತ್ತಿತರ ವಿಚಾರಗಳಿಂದ ರಾಜ್ಯ ರಾಜಕೀಯದಲ್ಲಿ ಬಣ ರಾಜಕೀಯ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ.
ಹೈಕಮಾಂಡ್ ಪ್ರತಿನಿಧಿಯಾಗಿ ಸಭೆಯಲ್ಲಿ ಭಾಗಿಯಾಗಲಿರುವ ಸುರ್ಜೇವಾಲಾ ಅವರು ಪಕ್ಷದ ನಾಯಕರಿಗೆ ಒಗ್ಗಟ್ಟಿನ ಮಂತ್ರ ಪಠಿಸುವಂತೆ ಸೂಚನೆ ನೀಡುವ ಸಾಧ್ಯತೆಗಳಿವೆ.
ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಕೆಪಿಸಿಸಿ ವಿಸ್ತೃತ ಸದಸ್ಯರ ಸಭೆಯಲ್ಲಿ ಬೆಳಗಾವಿಯಲ್ಲಿ ಗಾಂಧಿ ಭಾರತ ಸ್ಮರಣಾರ್ಥ ಜ.21ರಂದು ನಡೆಯಲಿರುವ ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ್ ಸಮಾವೇಶದ ಪೂರ್ವಸಿದ್ಧತೆ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದೇ ವೇಳೆ ಇತರ ರಾಜಕೀಯ ವಿಷಯಗಳು ಮತ್ತು ಶಾಸಕರ ಕುಂದುಕೊರತೆಗಳು, ಕೆಲವು ಸಚಿವರ ನಿರ್ಲಕ್ಷ್ಯಯುತ ನಡೆ ಸೇರಿದಂತೆ ಇತರೆ ವಿಚಾರಗಳ ಕುರಿತು ಚರ್ಚೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇನ್ನು ಸಭೆಯಲ್ಲಿ ಸಿದ್ದು ಬಣ ಯಾವ ಯಾವ ವಿಚಾರಗಳನ್ನು ಪ್ರಸ್ತಾಪಿಸಲಿದೆ ಎಂಬುದೂ ಕುತೂಹಲ ಮೂಡಿಸಿದೆ.
ಸಭೆ ಮುಂದೂಡುವುದರ ಹಿಂದೆ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕೈವಾಡವಿದೆ ಎಂದು ತಿಳಿದ ನಂತರ ಸಿಎಂ ಬಣವು ಕಾಂಗ್ರೆಸ್ ಮತ್ತಷ್ಟು ಚುರುಕಾಗಿದ್ದು, ತಮ್ಮನ್ನು ಬಲಪಡಿಸಿಕೊಳ್ಳುವ ಯತ್ನವನ್ನು ತೀವ್ರಗೊಳಿಸಿದೆ.
ಸಭೆ ವೇಳೆ 2023 ರ ವಿಧಾನಸಭಾ ಚುನಾವಣೆ ವೇಲೆ ಎಸ್ಸಿ/ಎಸ್ಟಿಗಳಿಗೆ ಕಲ್ಯಾಣ ಕಾರ್ಯಕ್ರಮಗಳು ಮತ್ತು ಎಸ್ಸಿ ಕೋಟಾ ವರ್ಗೀಕರಣದ ಭರವಸೆ ನೀಡಿ ಪಕ್ಷ ಅಧಿಕಾರಕ್ಕೆ ಬಂದಿದ್ದು, ಇದೀಗ ಭರವಸೆಯನ್ನು ಈಡೇರಿಸಬೇಕಿದೆ ಎಂದು ಸುರ್ಜೇವಾಲಾ ಅವರಿಗೆ ಮನಸ್ಸು ಪರಿವರ್ತಿಸುವ ಯತ್ನ ನಡೆಸುವ ಸಾಧ್ಯತೆಗಳಿವೆ.
ಕೆಪಿಸಿಸಿ ಅಧ್ಯಕ್ಷರನ್ನು ಹೊರತುಪಡಿಸಿ ಎಸ್ಸಿ/ಎಸ್ಟಿ ಶಾಸಕರೊಂದಿಗೆ ಸಭೆಯನ್ನು ನಡೆಸಲು ಅವರು ಯೋಜಿಸುತ್ತಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ಇಂದು ಬೆಳಿಗ್ಗೆ ಕೆಪಿಸಿಸಿ ಸಾಮಾನ್ಯ ಸಭೆ ನಡೆಯಲಿದ್ದು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಸೇರಿದಂತೆ ಪಕ್ಷದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ನಂತರ ಪಕ್ಷದ ಕಚೇರಿಯಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ.
ಈ ಸಭೆಯಲ್ಲಿ ನಿಗಮಗಳಿಗೆ ಮತ್ತು ಮಂಡಳಿಗಳಿಗೆ ಪಕ್ಷದ ಕಾರ್ಯಕರ್ತರ ನೇಮಕಾತಿ ಮತ್ತು ಪಕ್ಷದ ಸಂಘಟನೆಯ ಬಗ್ಗೆಯೂ ಚರ್ಚೆಗಳು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಇಂದು ನಡೆಯುವ ಕಾಂಗ್ರೆಸ್ ಪಕ್ಷದ ಎಲ್ಲಾ ಸಭೆಗಳಲ್ಲು ಸುರ್ಜೇವಾಲಾ ಅವರು ಹಾಜರಿರಲಿದ್ದು, ಗೃಹ ಸಚಿವ ಡಾ. ಜಿ. ಪರಮೇಶ್ವರ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಸೇರಿದಂತೆ ಸಿದ್ದರಾಮಯ್ಯ ಬಣದ ಇತರೆ ನಾಯಕರು ಮುಂದೂಡಲ್ಪಟ್ಟ ಎಸ್ಸಿ/ಎಸ್ಟಿ ಶಾಸಕರ ಸಭೆ ವಿಚಾರವನ್ನು ಪ್ರಸ್ತಾಪಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.