ಲಖನೌ: ಸಂಭಾಲ್ ನಲ್ಲಿ ನಡೆಯುತ್ತಿರುವ ಉತ್ಖನನದ ಬಗ್ಗೆ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದು, ಸಿಎಂ ಅಧಿಕೃತ ನಿವಾಸದ ಕೆಳಭಾಗದಲ್ಲಿಯೂ ಶಿವಲಿಂಗವಿದೆ ಎಂದು ಹೇಳಿದ್ದಾರೆ.
ಸಂಭಾಲ್ ನಲ್ಲಿ ಮುಘಲ್ ಕಾಲದ ಮಸೀದಿಯ ಆವರಣ, ಸುತ್ತಮುತ್ತಲ ಪ್ರದೇಶಗಳಲ್ಲಿ ಉತ್ಖನನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕಳೆದ ತಿಂಗಳು ಘರ್ಷಣೆ ಉಂಟಾಗಿತ್ತು.
ಈ ಬೆಳವಣಿಗೆಗಳ ಬಗ್ಗೆ ಲಖನೌನಲ್ಲಿ ಮಾತನಾಡಿರುವ ಅಖಿಲೇಶ್ ಯಾದವ್, ಬಿಜೆಪಿ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಿಕೊಳ್ಳುವುದಕ್ಕಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಉತ್ಖನನ ನಡೆಸುತ್ತಿದೆ. ಇದು ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಮಾಡಲಾಗಿರುವ ಉಪಾಯ ಎಂದು ವ್ಯಂಗ್ಯವಾಡಿದ್ದಾರೆ.
“ಮುಖ್ಯಮಂತ್ರಿಯವರ ನಿವಾಸದ ಕೆಳಗೆ ಶಿವಲಿಂಗವಿದೆ ಎಂದು ನಾವು ನಂಬುತ್ತೇವೆ. ಅಲ್ಲಿಯೂ ಉತ್ಖನನ ನಡೆಸಬೇಕು” ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
“ಬುಲ್ಡೋಜರ್ಗಳಿಂದ ಅಮಾಯಕರ ಮನೆಗಳನ್ನು ಅಕ್ರಮವಾಗಿ ಕೆಡವಲಾಗುತ್ತಿದೆ” ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಆರೋಪಿಸಿದ್ದಾರೆ.
“ಇದು ಅಭಿವೃದ್ಧಿಯಲ್ಲ ಆದರೆ ವಿನಾಶ. ಮುಖ್ಯಮಂತ್ರಿಯ ಕೈಯಲ್ಲಿ ಅಭಿವೃದ್ಧಿಯ ರೇಖೆಯಿಲ್ಲ, ವಿನಾಶದ ಗೆರೆ ಇದೆ” ಎಂದು ಯಾದವ್ ಟೀಕಾ ಪ್ರಹಾರ ನಡೆಸಿದ್ದಾರೆ.
ಅಖಿಲೇಶ್ ಯಾದವ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ, ಸಂಭಾಲ್ನಲ್ಲಿ ಉತ್ಖನನ ನಡೆದರೆ ಅವರಿಗೇನು ಸಮಸ್ಯೆ? ಎಂದು ಪ್ರಶ್ನಿಸಿದ್ದಾರೆ.
“2013 ರಲ್ಲಿ, ಅಖಿಲೇಶ್ ಯಾದವ್ 1,000 ಟನ್ ಚಿನ್ನವನ್ನು ಅಗೆಯಲು ಇಡೀ ರಾಜ್ಯದ ಆಡಳಿತ ಯಂತ್ರವನ್ನು ಬಳಸಿದರು, ಅವರು ಚಿನ್ನವನ್ನು ಉತ್ಖನನ ಮಾಡಲು ಸಿದ್ಧರಾಗಿದ್ದಾರೆ, ಆದರೆ ‘ಶಿವಲಿಂಗ’ದ ಉತ್ಖನನದ ಬಗ್ಗೆ ಅವರಿಗೆ ಸಮಸ್ಯೆ ಇದೆ. ಅದಕ್ಕಾಗಿಯೇ ಅವರು ಮುಖ್ಯಮಂತ್ರಿ ನಿವಾಸವನ್ನು ಉತ್ಖನನದ ಬಗ್ಗೆ ಮಾತನಾಡುತ್ತಿದ್ದಾರೆ.”ತ್ರಿಪಾಠಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.
ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಸಮಾಜವಾದಿ ಪಕ್ಷಕ್ಕೆ “ನಾಚಿಕೆಯಿಲ್ಲ” ಎಂದು ಕಟುವಾಗಿ ಟೀಕಿಸಿದ್ದಾರೆ. “ವೋಟ್ ಬ್ಯಾಂಕ್ ಗಾಗಿ ‘ಶಿವಲಿಂಗವನ್ನು ಅಪಹಾಸ್ಯ ಮಾಡುತ್ತಿದ್ದಾರೆ”ಎಂದು ಅವರು ಹೇಳಿದರು.