ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮತ್ತು ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ಸಚಿವ ಭೈರತಿ ಸುರೇಶ್ಗೂ ನೋಟಿಸ್ ಜಾರಿ ಮಾಡಿದೆ. ಇಡಿ ನೋಟಿಸ್ ನೀಡುತ್ತಿದ್ದಂತೆ ಪಾರ್ವತಿ ಸಿದ್ದರಾಮಯ್ಯ ಮತ್ತು ಭೈರತಿ ಸುರೇಶ್ ಧಾರವಾಡ ಏಕಸದಸ್ಯ ಪೀಠಕ್ಕೆ ಎರಡು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ.
ಈ ಸಂಬಂಧ ತುರ್ತು ವಿಚಾರಣೆ ನಡೆಸುವಂತೆ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ್ ಪೀಠಕ್ಕೆ ಮನವಿ ಮಾಡಿದರು. ಸೋಮವಾರ ಕಲಾಪದ ಕೊನೆಗೆ ವಿಚಾರಣೆ ನಡೆಸುವುದಾಗಿ ನ್ಯಾ.ಎಂ.ನಾಗಪ್ರಸನ್ನ ಒಪ್ಪಿಗೆ ಸೂಚಿಸಿದರು.ಈ ಮಧ್ಯೆ ಮುಡಾ ಹಗರಣದ ಸಿಬಿಐ ತನಿಖೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯೂ ಧಾರವಾಡದ ಹೈಕೋರ್ಟ್ನ ಪೀಠದಲ್ಲಿ ನಡೆಯುತ್ತಿದ್ದು ಅರ್ಜಿ ಸಲ್ಲಿಸಿರುವ ಸ್ನೇಹಮಯಿ ಕೃಷ್ಣಪರ ಹಿರಿಯ ವಕೀಲ ಮಣೀಂದರ್ ಸಿಂಗ್ ವಾದ ಮಂಡನೆ ಮಾಡಿ ಆರೋಪಿ ಸ್ಥಾನದಲ್ಲಿರುವವರ ವಾದ ಆಲಿಸುವ ಅಗತ್ಯವಿಲ್ಲ. ಅವರ ವಾದ ಮಂಡನೆ ಬೇಕಾಗಿಲ್ಲ ಎಂದು ಕೋರ್ಟ್ಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಸುಪ್ರೀಂಕೋರ್ಟ್ನಲ್ಲಿ ಆರೋಪಿಗಳ ವಾದಮಂಡನೆ ಕೇಳದಿರುವ ಬಗ್ಗೆ ಅನೇಕ ತೀರ್ಪುಗಳಿವೆ ಎಂದು ತೀರ್ಪುಗಳ ಉಲ್ಲೇಖ ಮಾಡಿದ್ದಾರೆ.ಮತ್ತೊಂದೆಡೆ ನ್ಯಾಯವಾದಿ ಶಶಿಕಿರಣ್ ಶೆಟ್ಟಿ ಅವರು ವಿಚಾರಣೆಗೆ ಕಾಲಾವಕಾಶ ನೀಡುವಂತೆ ಮಾಡಿದ ಕೋರಿಕೆಯನ್ನು ಕೋರ್ಟ್ ನಿರಾಕರಿಸಿದೆ.ದೇವರಾಜು ಪರ ವಾದ ಮಾಡುತ್ತಿರುವ ದುವೆ ಅವರು ಈ ದೂರನ್ನು ಬಹಳ ವರ್ಷಗಳ ನಂತರ ದಾಖಲಿಸಲಾಗಿದೆ. ಮೊದಲಿಗೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿ ನಂತರ ಹೈಕೋರ್ಟ್ಗೆ ದೂರು ದಾಖಲು ಮಾಡಲಾಗಿದೆ. ಬೇಕಂತಲೇ ಮುಖ್ಯಮಂತ್ರಿಯವರನ್ನು ಮುಜುಗರಕ್ಕೆ ಸಿಲುಕಿಸಲು ಈ ಪ್ರಕರಣ ದಾಖಲಿಸಿರುವುದಾಗಿ ತಮ್ಮ ವಾದ ಮಂಡನೆಯಲ್ಲಿ ಪ್ರಾಸ್ತಪಿಸಿದ್ದಾರೆ. ಮಧ್ಯಾಹ್ನದವರೆಗೂ ವಿಚಾರಣೆ ಮುಂದುವರಿಯಿತು.