ಮೈಸೂರು: ಯಾರು ನಿವೃತ್ತಿಯಾಗ್ತಾರೆ, ಏನಾಗ್ತಾರೆ ಅಂತಾ ಮುಂದೆ ಗೊತ್ತಾಗುತ್ತದೆ. ಅವರು ನಿವೃತ್ತಿ ಪಡೆಯುವಾಗ ಇನ್ನೊಬ್ಬರ ಬಗ್ಗೆ ಹೇಳೋದು ಸ್ವಾಭಾವಿಕ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಈಗ ಮನಬಂದಂತೆ ಮಾತಾಡುತ್ತಿದ್ದಾರೆ, ಮಾತಾಡಲಿ ಎಂದಿದ್ದಾರೆ.
ನಾಳೆ ಮೂರು ಲಕ್ಷಕ್ಕೂ ಅಧಿಕ ಜನ ನಮ್ಮ ಬೃಹತ್ ಸಮಾವೇಶದಲ್ಲಿ ಭಾಗವಹಿಸುತ್ತಾರೆ. ಪಾದಯಾತ್ರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ತಾ ಇದೆ. ಭ್ರಷ್ಟ ಸರ್ಕಾರ ಕಿತ್ತೋಗೆಯಲು ಪಾದಯಾತ್ರೆ ಮಾಡ್ತಾ ಇದ್ದೀವಿ. ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು. ಇದೇ ವೇಳೆ ಯಡಿಯೂರಪ್ಪ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಎಸ್ವೈ, ಸಿದ್ದರಾಮಯ್ಯ ಅವರು ಹೇಳಬೇಕು ಪಾಪ. ಅವರು ನಿವೃತ್ತಿ ತಗೊಂಡು ಮನೆಗೆ ಹೋಗುವಾಗ ಇನ್ನೊಬ್ಬರ ಬಗ್ಗೆ ಹೇಳೋದು ಸ್ವಾಭಾವಿಕ.
ಯಾರು ನಿವೃತ್ತಿಯಾಗ್ತಾರೆ, ಏನ್ ಆಗ್ತಾರೆ ಅನ್ನೊದು ಮುಂದೆ ಗೊತ್ತಾಗುತ್ತದೆ. ಪೊಕ್ಸೋ ಕೇಸ್ನಲ್ಲಿ ನಾಳೆ ಕೋರ್ಟ್ನಲ್ಲಿ ತೀರ್ಮಾನ ಆದಾಗ ಎಲ್ಲಾ ಬಹಿರಂಗವಾಗುತ್ತೆ. ಅಲ್ಲಿಯವರೆಗೆ ನಾನು ಏನು ಮಾತಾಡಲ್ಲ. ಅದಾದ ಬಳಿಕ ಸಿದ್ದರಾಮಯ್ಯಗೆ ಉತ್ತರ ಸಿಗುತ್ತೆ. ಅವರು ಈಗ ಮನಬಂದಂತೆ ಮಾತಾಡುತ್ತಿದ್ದಾರೆ ಮಾತಾಡಲಿ.
ಹತಾಶೆಯ ಮನೋಭಾವದಲ್ಲಿ ಇರೋದನ್ನು ಜನರೇ ತೀರ್ಮಾನ ಮಾಡ್ತಾರೆ ಎಂದರು.ನಾನು ತಪ್ಪು ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರ ಸಂಬಂಧ ಮಾತನಾಡಿದ ಬಿಎಸ್ವೈ, ಸಿಎಂ ತಮ್ಮ ಪತ್ನಿಗೆ ಬೆಲೆ ಬಾಳುವ ಸೈಟ್ಗಳನ್ನು ಕೊಟ್ಟಿದ್ದಾರೆ. ಮನೆಯವರಿಗೆ ಬೆಲೆ ಬಾಳುವ ಸೈಟ್ ಕೊಟ್ಟ ಉದಾಹರಣೆ ಇದ್ಯಾ? ಇದು ಅಕ್ಷಮ್ಯ ಅಪರಾಧ, ಅದಕ್ಕಾಗಿ ಹೋರಾಟ ಮಾಡ್ತಿದ್ದೇವೆ ಎಂದರು.ಇಂದು ಬೆಳಿಗ್ಗೆ ಮೈಸೂರಿಗೆ ಆಗಮಿಸಿದ ಚಾಮುಂಡಿ ದರ್ಶನ ಪಡೆದು ಸಿದ್ದರಾಮಯ್ಯ ಅವರು ತಿಂಡಿ ಸೇವಿಸುವ ಅವರ ನೆಚ್ಚಿನ ಮೈಲಾರಿ ಹೋಟೆಲ್ಗೆ ತೆರಳಿ ದೋಸೆ ಸವಿದರು.