ಬೆಳಗಾವಿ: ಬಿಜೆಪಿ ವಿಧಾನ ಪರಿಷತ ಸದಸ್ಯ ಸಿಟಿ ರವಿ ಸದಸ್ಯತ್ವ ವಜಾಗೊಳಿಸುವಂತೆ ಆಗ್ರಹಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಕರು ಬೆಳಗಾವಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಸಿಪಿಎಡ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು. ಬಳಿಕ ಚನ್ನಮ್ಮ ವೃತ್ತದಲ್ಲಿ ಸಿಟಿ ರವಿ ಅಣಕು ಶವಯಾತ್ರೆ ಮಾಡಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ಸಿ.ಟಿ.ರವಿ ಅವರನ್ನು ‘ಒಟಿ ರವಿ, ಒಸಿ ರವಿ’ ಎಂದು ಕರೆದ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಕ್ಕಾಗಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಸಿಟಿ ರವಿ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನಷ್ಟೇ ಅಲ್ಲ, ಇಡೀ ಸ್ತ್ರೀ ಕುಲಕ್ಕೆ ಅವಮಾನಿಸಿದ್ದಾರೆ. ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಬಳಸಿರುವ ಅವಹೇಳನಕಾರಿ ಮಾತುಗಳಿಂದ ರಾಜ್ಯದ ಮಹಿಳೆಯರಿಗೆ ನೋವಾಗಿದೆ. ಮಹಿಳೆಯರಿಗೆ ಅವಮಾನಿಸಿದ ಅವರ ವಿಧಾನ ಪರಿಷತ್ ಸದಸ್ಯತ್ವವನ್ನು ರದ್ದುಪಡಿಸಬೇಕು, ಜೈಲಿಗೆ ಕಳುಹಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ್ ಅವರು, ‘ಪರಿಷತ್ನಲ್ಲಿ ಸಿ.ಟಿ.ರವಿ ಸಚಿವ ಹೆಬ್ಬಾಳ್ಕರ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹೀಗಾಗಿ ಬಿಜೆಪಿ ಅವರ ರಾಜೀನಾಮೆ ಪಡೆಯಬೇಕು. ಇಲ್ಲವೇ ಪಕ್ಷದಿಂದ ವಜಾಗೊಳಿಸಬೇಕು. ಎಂಎಲ್ಸಿ ಸಿ.ಟಿ.ರವಿ ನಡವಳಿಕೆಯು ಅವರ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ, ಹಿಂದೂ ಧರ್ಮದ ಪರ ಎಂದು ಹೇಳಿಕೊಳ್ಳುವ ಬಿಜೆಪಿ ಪಕ್ಷದ ನಿಜವಾದ ಬಣ್ಣ ಬಯಲಾಗಿದೆ. ಬಿಜೆಪಿಯವರು ನಾಟಕೀಯ ಜೀವನ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆ ಪಕ್ಷಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮೃಣಾಲ್ ಹೆಬ್ಬಾಳ್ಕರ್, ಯುವರಾಜ್ ಕದಂ, ಕಲ್ಪನಾ ಜೋಶಿ, ಗುಂಡು ಪಾಟೀಲ್, ಜಯಶ್ರೀ ಮಾಳಗಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಾವಿರಾರು ಬೆಂಬಲಿಗರು ಭಾಗವಹಿಸಿದ್ದರು.