ಮೈಸೂರು: 40 ವರ್ಷ ದಿಂದ ವಿಧಾನಸಭೆಗೆ ಸಿದ್ದರಾಮಯ್ಯ ಹೋಗಿದ್ದಾರೆ. ಅವರ ಹೆಸರನ್ನು ರಸ್ತೆಗೆ ಇಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಂಸದ ಪ್ರತಾಪ್ ಸಿಂಹ ಸಿಎಂ ಪರ ಬ್ಯಾಟ್ ಬೀಸಿದ್ದಾರೆ.
ಮೈಸೂರಿನ ಕೆಆರ್ ಎಸ್ ರಸ್ತೆಗೆ ʼಸಿದ್ದರಾಮಯ್ಯ ಆರೋಗ್ಯ ರಸ್ತೆʼ ಎಂದು ಪಾಲಿಕೆ ನಾಮಕರಣ ಮಾಡಲು ಮುಂದಾದ ವಿಚಾರಕ್ಕೆ ವಿರೋಧ ವ್ಯಕ್ತವಾದ ಬಗ್ಗೆ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಮೈಸೂರಿನ ಸುಪುತ್ರ. ಸೈದ್ಧಾಂತಿಕವಾಗಿ ನಾವು ಅವರನ್ನು ವಿರೋಧಿಸುತ್ತೇನೆ. ಆದರೆ ಈ ವಿಚಾರದಲ್ಲಿ ವಿರೋಧ ಮಾಡಲ್ಲ. ಸ್ಪಷ್ಟ ಬಹುಮತದ ಜೊತೆ ಎರಡು ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಮೈಸೂರಿಗೆ ಸಿದ್ದರಾಮಯ್ಯನವರ ಕೊಡುಗೆ ಬಹಳ ಇದೆ ಎಂದು ಹೇಳಿದರು.
ಜಯದೇವ ಆಸ್ಪತ್ರೆ ಕಟ್ಟಡ, ಸೂಪರ್ ಸ್ಪೆಷಲಾಟಿ ಆಸ್ಪತ್ರೆ ಕಟ್ಟಿಸಿದ್ದು ಸಿದ್ದರಾಮಯ್ಯ. ರಾಜಪಥ ಮಾಡಿಸಿದ್ದು ಸಿದ್ದರಾಮಯ್ಯ. 40 ವರ್ಷ ದಿಂದ ವಿಧಾನಸಭೆಗೆ ಸಿದ್ದರಾಮಯ್ಯ ಹೋಗಿದ್ದಾರೆ. ಅವರ ಹೆಸರು ಇಡುವುದರಲ್ಲಿ ತಪ್ಪೇನಿದೆ. ಈ ವಿಚಾರದಲ್ಲಿ ತಕಾರರು ಎತ್ತಿದರೆ ಮೊಸರಿನಲ್ಲಿ ಕಲ್ಲು ಹುಡುಕಿದಂತೆ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಧಕರು ಬರೀ ಬಿಜೆಪಿಯಲ್ಲಿ ಮಾತ್ರ ಇಲ್ಲ. ಎಲ್ಲಾ ಪಕ್ಷದಲ್ಲೂ ಇದ್ದಾರೆ. ಸಿದ್ದರಾಮಯ್ಯ ಅವರ ಹೆಸರು ಇಡುವ ವಿಚಾರದಲ್ಲಿ ಪಕ್ಷಬೇಧ ಮಾಡಬೇಡಿ. ಸಣ್ಣತನ ತೋರಿಸಬೇಡಿ ಎಂದು ಮನವಿ ಮಾಡಿದ್ದಾರೆ. ಮಹಾರಾಜರ ಹೆಸರು ಎಲ್ಲಾ ಕಡೆ ಇಟ್ಟಿದ್ದೇವೆ. ಮಹಾರಾಜರ ನಂತರವೂ ಅನೇಕ ಸಾಧಕರು ಮೈಸೂರಿನಲ್ಲಿ ಬಂದಿದ್ದಾರೆ. ವಿಶ್ವೇಶ್ವರಯ್ಯ ಅವರಂಥ ಇಂಜಿನಿಯರ್ ಇರದಿದ್ದರೆ ಕನ್ನಂಬಾಡಿ ಕಟ್ಟಲು ಆಗುತ್ತಿತ್ತಾ? ಮಿರ್ಜಾ ಇಸ್ಮಾಯಿಲ್ ಇರದಿದ್ದರೆ ಬೆಂಗಳೂರಿಗೆ ವಿದ್ಯುತ್ ತೆಗೆದುಕೊಂಡು ಹೋಗಲು ಆಗುತ್ತಿತ್ತಾ ಎಂದು ಪ್ರಶ್ನಿಸಿ ಒಳ್ಳೆ ಒಳ್ಳೆಯ ದಿವಾನರು ಇದ್ದ ಕಾರಣ ಒಳ್ಳೆ ಅಭಿವೃದ್ಧಿ ಆಗಿದೆ.
ಅವರಿಗೆ ಇನ್ನೂ ಗೌರವ ಸಿಗಬೇಕಿದೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಕೆಂಪೇಗೌಡರ ನಂತರ ಬಂದ ಸಾಧಕರಿಗೆ ಎಷ್ಟು ಗೌರವ ಕೊಟ್ಟಿದ್ದೇವೋ ಅದೇ ರೀತಿ ಮೈಸೂರಿನಲ್ಲೂ ಮಹಾರಾಜರ ನಂತರ ಬಂದವರಿಗೆ ಗೌರವ ಕೊಡಬೇಕಿದೆ ಎಂದು ಹೇಳಿದರು.