ಬೆಳಗಾವಿ: ನಮ್ಮ ಬೇಡಿಕೆ ಸಂವಿಧಾನ ಬದ್ಧವಾಗಿದೆ. ಹೋರಾಟದ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ. ಮೀಸಲಾತಿ ಪಡೆದೇ ತೀರುತ್ತೇವೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಾಧಿಪತಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ನಡೆದ ಲಾಠಿಚಾರ್ಜ್ ಖಂಡಿಸಿ, ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಮೇಲೆ ಗುರುವಾರ ಧರಣಿ ನಡೆಸಿದ ಬಳಿಕ ಅವರು ಮಾತನಾಡಿದ ಅವರು, ಈಗ ಇವರು ಕೊಡದಿದ್ದರೇನಂತೆ ಮುಂದೆ ಇನ್ನೊಬ್ಬ ಸಿಎಂ ಬರ್ತಾರೆ. ಅವರಿಂದಾನೇ ನಾವು ಮೀಸಲಾತಿ ಪಡೆಯುತ್ತೇವೆ. ಸಂವಿಧಾನಬದ್ಧವಾಗಿ ನಮ್ಮ ಬೇಡಿಕೆ ಇದೆ. ಅಂಬೇಡ್ಕರ್ ಇವರದಷ್ಟೇ ಸ್ವತ್ತಲ್ಲ. ಅಂಬೇಡ್ಕರ್ ನಮಗೂ ಅನ್ವಯ ಆಗುತ್ತಾರೆ. ನಮ್ಮ ಹೋರಾಟ ನಿಲ್ಲದು ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಲಿಂಗಾಯತರ ವಿರುದ್ಧ ಸಿದ್ದರಾಮಯ್ಯ ಹೃದಯಹೀನರಾಗಿ ನಡೆದುಕೊಂಡಿದ್ದಾರೆ. ನೀವು ಅಧಿಕಾರಕ್ಕೆ ಬರಲು ನಾವು ಆಶೀರ್ವಾದ ಮಾಡಿದ್ದೇವು. ಅದಕ್ಕೆ ಪ್ರತಿಯಾಗಿ ನಮ್ಮನ್ನೇ ಹೊಡೆದಿದ್ದೀರಿ. ಮುಂದಿನ ಚುನಾವಣೆಯಲ್ಲಿ ಇದರ ಪರಿಣಾಮ ಎದುರಿಸುತ್ತೀರಿ ಎಂದು ಎಚ್ಚರಿಸಿದರು. ಲಾಠಿಚಾರ್ಜ್ ನಡೆಸಿದಾಗ ನಮ್ಮ ಸಮಾಜದ ಒಬ್ಬ ಶಾಸಕರು ಮುಖ್ಯಮಂತ್ರಿ ಬಳಿ ಹೋಗಿ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಲಾಠಿಚಾರ್ಜ್ ನಿಲ್ಲಿಸಿ ಎಂದು ಕೇಳಿದ್ದಾರೆ. ಏಯ್ ಹೊಡೀಲಿ ಬಿಡರಿ ಅವರನ್ನು. ಅವರು ನಮ್ಮನ್ನೇ ಹೆದರಿಸುತ್ತಾರೆಯೇ? ನಮ್ಮ ಬಳಿಯೂ ಲಾಠಿ ಇದೆ ಎಂದು ಸಿದ್ದರಾಮಯ್ಯ ಮಾರುತ್ತರ ನೀಡಿದ್ದಾರೆ. ಈ ವಿಷಯವನ್ನು ಶಾಸಕರೇ ಬಂದು ನನಗೆ ಹೇಳಿದ್ದಾರೆ. ಸುವರ್ಣ ವಿಧಾನಸೌಧದ ಸಿಸಿಟಿವಿ ಕ್ಯಾಮೆರಾಗಳನ್ನು ತಪಾಸಣೆ ಮಾಡಿ ಖಾತ್ರಿ ಮಾಡಿಕೊಳ್ಳಬಹುದು ಎಂದರು.
ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದಾಗ ನಾವೆಲ್ಲ ನಿಮ್ಮ ತಲೆ ಮೇಲೆ ಹೂವು ಹಾಕಿ ಆಶೀರ್ವಾದ ಮಾಡಿದ್ದೇವು. ಆದರೆ, ಲಿಂಗಾಯತರ ಬಗ್ಗೆ ನಿಜವಾಗಿಯೂ ನಿಮ್ಮ ಧೋರಣೆ ಏನು ಎಂಬುದನ್ನು ಈಗ ತೋರಿಸಿದ್ದೀರಿ. 2028ಕ್ಕೆ ನಮ್ಮ ಸಮಾಜಕ್ಕೆ ಗೌರವ ಕೊಡುವ ಮುಖ್ಯಮಂತ್ರಿಯನ್ನೇ ನಾವು ಆರಿಸುತ್ತೇವೆ ಎಂದೂ ಸ್ವಾಮೀಜಿ ಎಚ್ಚರಿಸಿದರು. ನಿಮ್ಮ ಸರ್ಕಾರ ಇರುವವರೆಗೂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವುದೇ ಇಲ್ಲ ಎಂಬುದನ್ನಾದರೂ ಸ್ಪಷ್ಟಪಡಿಸಬೇಕು. ನಂತರ ನಮ್ಮ ದಾರಿ ನಾವು ಕಂಡುಕೊಳ್ಳುತ್ತೇವೆ. ತಕ್ಷಣವೇ ಎಲ್ಲರ ಮೇಲಿನ ಪ್ರಕರಣ ಹಿಂಪಡೆಯಬೇಕು. ಬಹಿರಂಗವಾಗಿ ಸಮಾಜದ ಕ್ಷಮೆ ಕೇಳಬೇಕು. ಅಲ್ಲಿಯವರೆಗೂ ರಾಜ್ಯದಾದ್ಯಂತ ಹೋರಾಟ ನಿಲ್ಲುವುದಿಲ್ಲ ಎಂದರು.