ಬೆಂಗಳೂರು: ಸಿದ್ದರಾಮಯ್ಯ ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸಿಎಂ ಆಗ್ತಾರೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಅವರು ಕುತೂಹಲಕರ ಹೇಳಿಕೆ ನೀಡುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.
ಇಂದು ಸಂಜೆ ಕಾಂಗ್ರೆಸ್ ಪಕ್ಷದ ಶಾಸಕಾಂಗದ ಸಭೆ ನಡೆಯುವ ಬೆನ್ನಲ್ಲೆ ಬಾಲಕೃಷ್ಣ ಅವರ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಬಗೆಬಗೆ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆಶಾಸಕಾಂಗ ಪಕ್ಷದ ಸಭೆ ಹಿನ್ನೆಲೆ ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಬಾಲಕೃಷ್ಣ ಮಾತನಾಡಿ,ಶಾಸಕರು ಚರ್ಚೆ ಮಾಡುತ್ತಿಲ್ಲ, ಮಾಧ್ಯಮಗಳಲ್ಲಿ ಚರ್ಚೆ ಆಗ್ತಿದೆ. ಸಿದ್ದರಾಮಯ್ಯ ಬಳಿಕ ಡಿಸಿಎಂ ಡಿಕೆಶಿ ಆವರು ಸಿಎಂ ಆಗ್ತಾರೆ, ಸಿದ್ದರಾಮಯ್ಯ ಬಳಿಕ ಅವರೇ ಆಗಬೇಕಲ್ವಾ? ಸಿಎಂ ಅಭ್ಯರ್ಥಿ ಬೇರೆ ಯಾರಿದ್ದಾರೆ? ಆದರೆ ಈ ಅವಧಿಯಲ್ಲೇ ಆಗ್ತಾರ ಅನ್ನೋದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಹೇಳಿದ್ದಾರೆ.
ಒಕ್ಕಲಿಗರ ಸಂಘದಿಂದ ಡಿಕೆಶಿ ಸಿಎಂ ಮಾಡಲು ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರೊ ಹೇಳಿದ್ರು ಅಂದ ಮಾತ್ರಕ್ಕೆ ಹೇಳಿದವರನ್ನೆಲ್ಲಾ ಸಿಎಂ ಮಾಡೋದಕ್ಕೆ ಆಗಲ್ಲ. ಅವರು ಜಾತಿ ಅಭಿಮಾನದಿಂದ ಹೇಳಿದ್ದಾರೆ. ಹೈಕಮಾಂಡ್ ನಾಯಕರು ಅಂತಿಮ ನಿರ್ಧಾರ ಮಾಡ್ತಾರೆ ಎಂದು ತಿಳಿಸಿದ್ದಾರೆ.