ಬೆಂಗಳೂರು: ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿಜೆಪಿಯ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ತಮಗೆ ಮಾಹಿತಿಯಿಲ್ಲ ಎಂದು ಗೃಹಸಚಿವ ಕಾಂಗ್ರೆಸ್ ಹಿರಿಯ ಮುಖಂಡ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ನಡೆಯಲಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲ್ಲೋದಕ್ಕೆ ರಣನೀತಿ ರೂಪಿಸುತ್ತಿದ್ದೇವೆ. ವಿಶೇಷವಾಗಿ ಸಿಪಿ ಯೋಗೇಶ್ವರ್ ಬಗ್ಗೆ ನನಗೇನೂ ಗೊತ್ತಿಲ್ಲ. ಯೋಗೇಶ್ವರ್ ಕಾಂಗ್ರೆಸ್ ಗೆ ಬರೋ ವಿಚಾರ ಏನಿದ್ರೂ ಹೈಕಮಾಂಡ್ ನೋಡಿಕೊಳ್ಳುತ್ತೆ. ಸಿಪಿ ಯೋಗೇಶ್ವರ್ ನನಗೆ ಆತ್ಮೀಯ ಸ್ನೇಹಿತರು.
ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಬಿಜೆಪಿಗೆ ರಾಜೀನಾಮೆ ಕೊಟ್ಟು ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಾರೆ ಎನ್ನುವ ವಿಚಾರವಿದೆ. ಒಂದು ವೇಳೆ ಕಾಂಗ್ರೆಸಿಗೆ ಬಂದು ಸ್ಪರ್ಧೆ ಮಾಡೋದಾದ್ರೆ ಆ ತೀರ್ಮಾನ ಏನಿದ್ರು ಹೈಕಮಾಂಡ್ ಮಾಡುತ್ತೆ ಎಂದರು.ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಡಿ. ಕೆ.ಸುರೇಶ್ ಸ್ಪರ್ಧೆ ವಿಚಾರಕ್ಕೆ ಸಂಬಂಧಪಟ್ಟಂತೆ, ನಾವು ನಿಲ್ಲಿ ಅಂತಾ ಹೇಳುತ್ತಿದ್ದೇವೆ ಆದರೆ, ಅದರ ಅಂತಿಮ ನಿರ್ಧಾರವನ್ನು ಕೂಡ ಹೈಕಮಾಂಡ್ ನೋಡಿಕೊಳ್ಳುತ್ತೆ ಎಂದಿದ್ದಾರೆ.