ಬೈರತ್: ಸಿರಿಯಾದಲ್ಲಿ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಆಡಳಿತ ಅಂತ್ಯಗೊಂಡಿದೆ ಎಂದು ಸಿರಿಯಾದ ಬಂಡಾಯ ಗುಂಪು ಹೇಳಿಕೊಂಡಿದೆ. ಬಂಡುಕೋರರು ಡಮಾಸ್ಕಸ್ ಪ್ರವೇಶಿಸಿದ ಬಳಿಕ ಸಿರಿಯಾ ಅಧ್ಯಕ್ಷ ದೇಶ ತೊರೆದು ಬೇರೆಡೆಗೆ ಪಲಾಯನ ಮಾಡಿದ್ದಾರೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
ಈ ಕುರಿತು ‘ಅಸೋಸಿಯೇಟ್ ಪ್ರೆಸ್’ ಜೊತೆ ಮಾತನಾಡಿದ ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯದ ಮುಖ್ಯಸ್ಥ ರಾಮಿ ಅಬ್ದುಲ್ ರೆಹಮಾನ್, ‘ಅಸ್ಸಾದ್ ಅವರು ಇಂದು ಮುಂಜಾನೆ ವಿಮಾನದ ಮೂಲಕ ತೆರಳಿದ್ದಾರೆ’ ಎಂದು ಹೇಳಿದರು. ಅಸ್ಸಾದ್ ದೇಶದಿಂದ ಪಲಾಯನಗೈದಿದ್ದಾರೆ ಎಂಬ ವದಂತಿಯನ್ನು ಸರ್ಕಾರ ನಿರಾಕರಿಸಿದೆ. ಅಸ್ಸಾದ್ ರಷ್ಯಾ ಅಥವಾ ಟೆಹರಾನ್ಗೆ ಹೋಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಬಶರ್ ಅಲ್-ಅಸ್ಸಾದ್ ರಷ್ಯಾದ ಸರಕು ವಿಮಾನದಲ್ಲಿ ಸಿರಿಯಾವನ್ನು ತೊರೆದಿದ್ದಾರೆ ಮತ್ತು ಅಸ್ಸಾದ್ ಅವರ ವಿಮಾನವು ರಾಡಾರ್ನಿಂದ ಕಾಣೆಯಾಗಿದೆ.
ಸಿರಿಯಾದ ಪ್ರಧಾನಿ ಮೊಹಮ್ಮದ್ ಗಾಜಿ ಜಲಾಲಿ ಅವರು ತಮ್ಮ ಮನೆಯಿಂದಲೇ ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿದರು ಮತ್ತು ಅವರು ದೇಶದಲ್ಲಿಯೇ ಉಳಿದು ಅಧಿಕಾರದ ಸುಗಮ ಹಸ್ತಾಂತರಕ್ಕೆ ಶ್ರಮಿಸುವುದಾಗಿ ಹೇಳಿದ್ದಾರೆ. ಬಂಡುಕೋರರ ಗುಂಪು ಸಿರಿಯಾದಲ್ಲಿ ಆಕ್ರಮಣವನ್ನು ಘೋಷಿಸಿದೆ. ಅಸ್ಸಾದ್ ಸಹೋದರ ಮಹೇರ್ ಅಲ್-ಅಸ್ಸಾದ್ ಕೂಡ ಪರಾರಿಯಾಗಿದ್ದಾರೆ. ಬಂಡುಕೋರರು ಎಲ್ಲಾ ಕಡೆಯಿಂದ ರಾಜಧಾನಿ ಡಮಾಸ್ಕಸ್ ಪ್ರವೇಶಿಸಿದ್ದಾರೆ. ಬಂಡುಕೋರರು ಡಮಾಸ್ಕಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದ್ದಾರೆ. ಸೇನಾ ಪ್ರಧಾನ ಕಛೇರಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಂಡುಕೋರ ಗುಂಪುಗಳಿಗೆ ಅಮೆರಿಕ ಮತ್ತು ಇರಾನ್ ಬೆಂಬಲವಿದೆ. ಅಸ್ಸಾದ್ ಆಡಳಿತ ಅಂತ್ಯಗೊಂಡಿದೆ ಎಂದು ಬಂಡುಕೋರ ಗುಂಪುಗಳು ಅಧಿಕೃತ ಹೇಳಿಕೆಯಲ್ಲಿ ತಿಳಿಸಿವೆ.