ಬೆಂಗಳೂರು: ಸಿಲಿಂಡರ್ ಅನಿಲ ಸೋರಿಕೆಯಿಂದ ಸಂಭವಿಸಿದ ಸ್ಫೋಟದಲ್ಲಿ ಒಂದೇ ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ. ಶನಿವಾರ ಮಧ್ಯಾಹ್ನ ಡಿ. ಜೆ ಹಳ್ಳಿಯ 3ನೇ ಕ್ರಾಸ್ನಲ್ಲಿರುವ ಆನಂದ್ ಥಿಯೇಟರ್ ಬಳಿಯಿರುವ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿದೆ.
ಸೈಯದ್ ನಾಸಿರ್ ಪಾಶಾ, ಅವರ ಪತ್ನಿ ತಸೀನಾ ಬಾನು, 7 ವರ್ಷದ ಮಗ ಹಾಗೂ 5 ವರ್ಷದ ಮಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೀವನೋಪಾಯಕ್ಕಾಗಿ ಪಾನಿಪುರಿ ವ್ಯಾಪಾರ ಮಾಡುತ್ತಿದ್ದ ಸೈಯದ್ ನಾಸೀರ್, ಶನಿವಾರ ಬೆಳಗ್ಗೆ ಮನೆಯ ಗ್ಯಾಸ್ ಸಿಲಿಂಡರ್ನ ರೆಗ್ಯುಲೇಟರ್ ಆನ್ ಮಾಡಿಟ್ಟಿದ್ದರು.
11.30ಕ್ಕೆ ಮನೆಗೆ ಮರಳುತ್ತಿದ್ದಂತೆ ಗ್ಯಾಸ್ ವಾಸನೆ ಬಂದಿದೆ. ತಕ್ಷಣ ರೆಗ್ಯೂಲೇಟರ್ ತೆಗೆದು ಮನೆಯಿಂದ ಪತ್ನಿ ಮಕ್ಕಳನ್ನ ದೂರ ಕಳಿಸಲು ಮುಂದಾಗಿದ್ದರು. ಜೊತೆಗೆ ಗ್ಯಾಸ್ ವಾಸನೆ ಹೋಗಲಿ ಎಂದು ಫ್ಯಾನ್ ಆನ್ ಮಾಡಿದ್ದರು. ಆದರೆ ಮನೆಯಲ್ಲೆಲ್ಲ ತುಂಬಿಕೊಂಡಿದ್ದ ಗ್ಯಾಸ್ ಒಮ್ಮೆಲೆ ಸ್ಫೋಟಕ್ಕೆ ಕಾರಣವಾಗಿದೆ. ಸ್ಫೋಟದ ತೀವ್ರತೆಗೆ ನಾಲ್ವರು ಗಂಭೀರವಾಗಿ ಗಾಯಗೊಂಡರೆ, ಮನೆಯ ಮೇಲ್ಛಾವಣಿ ಹಾರಿಹೋಗಿದೆ. ಸ್ಫೋಟದಿಂದ ಅಕ್ಕಪಕ್ಕದಲ್ಲಿದ್ದ ಕೆಲ ಮನೆಗಳಿಗೂ ಹಾನಿಯಾಗಿದ್ದು, ಕಿಟಕಿ ಗಾಜುಗಳು ಪುಡಿಯಾಗಿವೆ. ಸ್ಥಳಕ್ಕೆ ಡಿ.ಜೆ ಹಳ್ಳಿ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.