ಹುಬ್ಬಳ್ಳಿ: ಬಿಜೆಪಿ ಎಂಎಲ್ಸಿ ಸಿ.ಟಿ. ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಪೊಲೀಸ್ ಅಧಿಕಾರಿಗಳ ವರ್ತನೆಯನ್ನು ನಾವು ಖಂಡಿಸುತ್ತೇವೆ. ಈ ಬಗ್ಗೆ ನಾವು ಕಾನೂನು ಹೋರಾಟ ಮಾಡುತ್ತೇವೆ. ಸರ್ಕಾರ ಒಂದೇ ಇರುವುದಿಲ್ಲ, ಬದಲಾಗುತ್ತಿರುತ್ತದೆ ಎಂಬುದು ನೆನಪಿರಲಿ. ಹೀಗಾಗಿ, ಬೆಳಗಾವಿ ಪೊಲೀಸ್ ಕಮಿಷನರ್ ಎಚ್ಚರಿಕೆಯಿಂದ ಇರಬೇಕು ಎಂದು ಟೀಕಿಸಿದ್ದಾರೆ.
ಖಾನಾಪುರ, ಕಬ್ಬಿನ ಗದ್ದೆ ಕಡೆ ಕರೆದುಕೊಂಡು ಹೋಗುತ್ತೀರಿ. ಬೆಳಗಾವಿ ಪೊಲೀಸ್ ಕಮಿಷನರ್ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ಸುವರ್ಣಸೌಧಕ್ಕೆ ನುಗ್ಗಿದವರ ಬಂಧನ ಆಗಿಲ್ಲ. ಬೆಳಗಾವಿ ಪೊಲೀಸ್ ಕಮಿಷನರ್ಗೆ ಕಾನೂನಿನ ಪಾಠ ಆಗಬೇಕು. ಸುವರ್ಣಸೌಧದಲ್ಲಿ ನಡೆದ ಘಟನೆ ಬಗ್ಗೆ ತರಾತುರಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ದೂರು ಕೊಟ್ಟವರು ಆಪ್ತ ಸಹಾಯಕ, ಅವರು ಒಳಗಡೆ ಇದ್ದರಾ? ಬೆಳಗಾವಿ ಪೊಲೀಸ್ ಕಮಿಷನರ್ಗೆ ಸಾಮಾನ್ಯ ಜ್ಞಾನ ಇರಬೇಕು. ಬೆಳಗಾವಿ ಕಮಿಷನರ್ ಐಪಿಎಸ್ ಆಗಲು ಅಸಮರ್ಥರು ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ನೀಡಿದ್ದಾರೆ.