ಬೆಂಗಳೂರು: ತಮ್ಮನ್ನು ವಶಕ್ಕೆ ಪಡೆದ ಬೆಳಗಾವಿ ಪೊಲೀಸರು ರಾತ್ರಿಯೆಲ್ಲಾ ಊರಿಂದ ಊರಿಗೆ ಸುತ್ತಾಡಿಸಿದ ಬಗ್ಗೆ ತನಿಖೆಯಾಗಬೇಕು ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ಮಾಧ್ಯಮ ವಾಹಿನಿಯೊಂದರೊಂದಿಗೆ ಮಾತನಾಡಿರುವ ಅವರು, ಬೆಳಗಾವಿ ಪೊಲೀಸರು ಸುವರ್ಣ ಸೌಧದಲ್ಲಿ ತಮ್ಮನ್ನು ವಶಕ್ಕೆ ಪಡೆದ ನಂತರ ಖಾನಪುರಕ್ಕೆ ಕರೆದುಕೊಂಡು ಹೋಗಿ ನಂತರ ರಾತ್ರಿ ಕೆಲ ಹೊತ್ತಿನನಂತರ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ಕಿತ್ತೂರು, ಬೆಳವಾಡಿ, ಸೌದತ್ತಿ, ಲೋಕಪುರ ರಾಮದುರ್ಗ ಸೇರಿದಂತೆ ಹಲವು ಠಾಣೆಗಳಿಗೆ ಸುತ್ತಿಸಿದರು.
ನಾನು ಅವರ ವರ್ತನೆಯನ್ನು ಪ್ರತಿರೋಧಿಸಿ ಪ್ರತಿಭಟಿಸಿದರು ಏನು ಪ್ರಯೋಜನವಾಗಲಿಲ್ಲ. ನನ್ನನ್ನು ಅಮಾನುಷವಾಗಿ ನಡೆಸಿಕೊಂಡಿದ್ದಾರೆ. ಒಂದು ಹಂತದಲ್ಲಿ ಇವರು ನನ್ನನ್ನು ಸುತ್ತಿಸುತ್ತಿರುವ ಬಗ್ಗೆ ತೀವ್ರ ಅನುಮಾನಗೊಂಡು ಪ್ರಶ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು, ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ವಿಧಾನ ಪರಿಷತ್ನಲ್ಲಿ ನಡೆದಿರುವ ಘಟನೆ ಬಗ್ಗೆ ತನಿಖೆ ನಡೆಸುವಂತೆ ಬರೆದಿರುವ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ರವಿ,ಈ ಬಗ್ಗೆಯೂ ತನಿಖೆ ನಡೆಯಲಿ, ನಾನು ತಪ್ಪಿತಸ್ಥನಾಗಿದ್ದರೆ ನನಗೂ ಶಿಕ್ಷೆಯಾಗಲಿ ಎಂದಿದ್ದಾರೆ.ನಾನು ಪೊಲೀಸರಿಗೆ ನೀಡಿರುವ ದೂರನ್ನು ತೆಗೆದುಕೊಳ್ಳದೇ ಇರುವುದೇ ಕಾನೂನು ಉಲ್ಲಂಘನೆಯಾಗಿದೆ. ಈ ಬಗ್ಗೆಯೂ ತಜ್ಞರ ಜತೆ ಚರ್ಚಿಸಿ ಕಾನೂನು ಸಮರ ನಡೆಸಲಿದ್ದೇನೆ ಎಂದು ಹೇಳಿದ್ದಾರೆ.