ಎಎಪಿ ಶಾಸಕ ನರೇಶ್ ಬಲ್ಯಾನ್ ಅವರನ್ನು ನ್ಯಾಯಾಲಯ 2 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಕಳೆದ ವರ್ಷ ದಾಖಲಾದ ಸುಲಿಗೆ ಪ್ರಕರಣದಲ್ಲಿ ಶನಿವಾರ ಅವರನ್ನು ಬಂಧಿಸಲಾಗಿತ್ತು. ಭಾನುವಾರ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ಗೆ ನರೇಶ್ ಬಲ್ಯಾನ್ನನ್ನು ಹಾಜರುಪಡಿಸಿದ ಪೊಲೀಸರು, ನ್ಯಾಯಾಲಯ 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಆದೇಶಿಸಿದೆ.
ನ್ಯಾಯಾಲಯದಿಂದ ಕರೆತರುವ ವೇಳೆ ಬಲ್ಯಾನ್ ಸುದ್ದಿಗಾರರೊಂದಿಗೆ ಮಾತನಾಡಿ, ದೆಹಲಿಯಲ್ಲಿ ಚುನಾವಣೆ ಇದೆ. ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಈ ರೀತಿ ಮಾಡುತ್ತಿದೆ ಎಂದು ಆರೋಪಿಸಿದರು. ಇನ್ನು ಬಲ್ಯಾನ್ ಬಂಧನ ಕುರಿತಂತೆ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ನರೇಶ್ ಅವರನ್ನು ಬಂಧಿಸುವ ಮೂಲಕ ಕೇಂದ್ರ ಸರ್ಕಾರ ದರೋಡೆಕೋರರ ವಿರುದ್ಧ ಧ್ವನಿ ಎತ್ತಿದರೆ ಜೈಲಿಗೆ ಕಳುಹಿಸುತ್ತದೆ ಎಂಬ ಸಂದೇಶವನ್ನು ದೆಹಲಿಯ ಜನತೆಗೆ ನೀಡಿದೆ ಎಂದರು.
ಕಪಿಲ್ ಸಾಂಗ್ವಾನ್ ವಿರುದ್ಧ ಬಲ್ಯಾನ್ ದೆಹಲಿ ಪೊಲೀಸರಿಗೆ ಹತ್ತಾರು ದೂರುಗಳನ್ನು ನೀಡಿದ್ದು, ಹೀಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಎಎಪಿ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಜ್ರಿವಾಲ್ ಅವರು, ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಈ ವಿಷಯವನ್ನು ಪ್ರಸ್ತಾಪಿಸುತ್ತಲೇ ಬಂದಿದ್ದೇವೆ ಎಂದರು.
ಬಲ್ಯಾನ್ ಸುಲಿಗೆ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ವಿದೇಶದಲ್ಲಿ ನೆಲೆಸಿರುವ ನರೇಶ್ ಬಲ್ಯಾನ್ ಮತ್ತು ದರೋಡೆಕೋರ ಕಪಿಲ್ ಸಾಂಗ್ವಾನ್ ನಡುವಿನ ಸಂಭಾಷಣೆಯ ಆಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಉದ್ಯಮಿಗಳಿಂದ ಸುಲಿಗೆ ಉಲ್ಲೇಖವಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ. ದೆಹಲಿಯ ಉತ್ತಮ್ ನಗರ ವಿಧಾನಸಭಾ ಕ್ಷೇತ್ರದ ಶಾಸಕ ನರೇಶ್ ಬಲ್ಯಾನ್ ಅವರನ್ನು ಶನಿವಾರ ಆರ್ಕೆ ಪುರಂ ಕ್ರೈಂ ಬ್ರಾಂಚ್ ಕಚೇರಿಯಲ್ಲಿ ವಿಚಾರಣೆಗೆ ಕರೆಯಲಾಗಿತ್ತು. ತದ ನಂತರ ಪೊಲೀಸರು ಅವರನ್ನು ಬಂಧಿಸಿದ್ದರು.