ಬೆಳಗಾವಿ: ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಅಧಿವೇಶನದ 100ನೇ ವರ್ಷಾಚರಣೆ ಹಾಗೂ ರಾಜಕೀಯ ಮತ್ತು ಚುನಾವಣಾ ಸವಾಲುಗಳಿಗೆ ಕಾರ್ಯತಂತ್ರ ರೂಪಿಸುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ)ಯು ನವ ಸತ್ಯಾಗ್ರಹ ಬೈಠಕ್ 2025 ಆರಂಭಿಸಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ನ ಉನ್ನತ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. 100 ವರ್ಷಗಳ ಹಿಂದೆ ಮಹಾತ್ಮ ಗಾಂಧಿಯವರು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸ್ಥಳದಲ್ಲಿಯೇ ಇಂದು ಐತಿಹಾಸಿಕ ಸಭೆ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಜೈರಾಮ್ ರಮೇಶ್ ಮತ್ತು ಕೆಸಿ ವೇಣುಗೋಪಾಲ್ ಸೇರಿದಂತೆ ಇತರರು ಐತಿಹಾಸಿಕ ಸಭೆಯಲ್ಲಿ ಭಾಗವಹಿಸಿದ್ದಾರೆ.
ಮುಂಬರುವ ಸವಾಲುಗಳಗನ್ನು ಎದುರಿಸಲು ಸಿದ್ಧರಾಗಲು ಕಾಂಗ್ರೆಸ್ ಮುಂದಿನ ವರ್ಷಕ್ಕೆ ಕ್ರಿಯಾ ಯೋಜನೆಯನ್ನು CWC ಸಭೆಯಲ್ಲಿ ನಿರ್ಧರಿಸಲಿದೆ. ಗೃಹ ಸಚಿವ ಅಮಿತ್ ಶಾ ಅವರು ಬಿಆರ್ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವನ್ನು ಚರ್ಚೆಗೆ ತೆಗೆದುಕೊಳ್ಳಲಾಗುವುದು. ಇದರ ವಿರುದ್ಧ ಪ್ರಬಲ ಹೋರಾಟ ಮಾಡುವ ಬಗ್ಗೆ ವಿರೋಧ ಪಕ್ಷವು ತೀರ್ಮಾನಿಸಲಿದೆ. ಮಹಾತ್ಮ ಗಾಂಧಿಯವರ ಪರಂಪರೆಯನ್ನು ರಕ್ಷಿಸಲು, ಸಂರಕ್ಷಿಸಲು ಮತ್ತು ಉತ್ತೇಜಿಸಲು ಕಾಂಗ್ರೆಸ್ ತನ್ನನ್ನು ತಾನು ಪುನಃ ಸಮರ್ಪಿಸಿಕೊಳ್ಳುತ್ತದೆ. ನಾವೆಲ್ಲರೂ ಒಟ್ಟಾಗಿ ಬಾಪು ಅವರ ಸಿದ್ಧಾಂತ ಮತ್ತು ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತೇವೆ ಮತ್ತು ದ್ವೇಷದ ರಾಜಕೀಯವನ್ನು ಸತ್ಯ ಮತ್ತು ಅಹಿಂಸೆಯಿಂದ ಸೋಲಿಸುತ್ತೇವೆ ಎಂದು ಪ್ರಧಾನ ಕಾರ್ಯದರ್ಶಿ ಸಂವಹನದ ಉಸ್ತುವಾರಿ ಜೈರಾಮ್ ರಮೇಶ್ ಹೇಳಿದರು.