ಬೆಳಗಾವಿ: ಈ ತಿಂಗಳ 9ರ ಸೋಮವಾರದಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಕಲಾಪ ನಡೆಯಲಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸುವರ್ಣ ಸೌಧದ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಾಡು ಮಾಡಿದ್ದಾರೆ.
ಈಗಾಗಲೇ ಪೊಲೀಸರು ಸುವರ್ಣಸೌಧದ ಬಳಿ ಬೀಡುಬಿಟ್ಟಿದ್ದು, ಹಲವು ಪೊಲೀಸರಿಗಾಗಿ ಅಲ್ಲಿಯೇ ವಸತಿ ಸಮ್ಮುಚ್ಛಯವನ್ನು ನಿರ್ಮಿಸಲಾಗಿದೆ. ಸುಮಾರು 2500 ಪೊಲೀಸರಿಗೆ ಜರ್ಮನ್ ಟೆಂಟ್ ಅಳವಡಿಸುವ ಮೂಲಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.ಬಂದೋಬಸ್ತ್ ಬಗ್ಗೆ ಮಾಹಿತಿ ನೀಡಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರು, ಬಂದೋಬಸ್ತ್ಗಾಗಿ 6200 ಪೊಲೀಸರನ್ನು ನಿಯೋಜಿಸಿರುವುದಾಗಿ ತಿಳಿಸಿದ್ದಾರೆ.
100 ಸಿಪಿಐ, 235 ಪಿಎಸ್ಐ 35 ಡಿಎಆರ್ ತುಕಡಿಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಿರುವುದಾಗಿ ಹೇಳಿದ್ದಾರೆ. ಸುವರ್ಣಸೌಧ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಒಟ್ಟು 500 ಸಿಸಿ ಕ್ಯಾಮೆರಾ-ಗಳನ್ನು ಅಳವಡಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದು ಹೋಗುವವರ ಮೇಲೆ ನಿಗಾ ವಹಿಸಲು ವ್ಯವಸ್ಥೆ ಮಾಡಲಾಗಿದೆ.
ಪೊಲೀಸರಿಗಾಗಿ ಆರು ಕಡೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.ಈಬಾರಿಯೂ ಸಹ ಎಂಇಎಸ್ ನವರಿಗೆ ಮಹಾಮೇಳಾವ ನಡೆಸಲು ಅನುಮತಿ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಇಂದು ಬೆಳಗಾವಿಜಿಲ್ಲಾಧಿಕಾರಿ ಮಹಮ್ಮದ್ ರೋಷನ್, ಪೊಲೀಸ್ ಆಯುಕ್ತರು ಎಸ್.ಪಿ. ಜಿಲ್ಲಾಪಂಚಾಯಿತ್ ಸಿಇಒ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸುವರ್ಣಸೌಧದಲ್ಲಿ ಸ್ವಚ್ಛತೆ ಹಾಗೂ ಸುವರ್ಣಸೌಧ ಸುತ್ತ ಇರುವ ಪ್ರದೇಶವನ್ನು ಪರಿಶೀಲನೆ ನಡೆಸಿ ಅಧಿವೇಶನದ ಯಶಸ್ವಿಗೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸಂಬಂಧಪಟ್ಟವರಿಗೆ ಸೂಚಿಸುವ ಮೂಲಕ ಕಲಾಪದ ಯಶಸ್ಸಿಗೆ ಸಕಲ ಸಿದ್ಧತೆ ನಡೆಸಿದ್ದಾರೆ.