ನವದೆಹಲಿ:ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸೂರ್ಯ ಘರ್ ಮಫ್ತಿ ಬಿಜ್ಲಿ ಯೋಜನೆ (PMSGMBY) ತನ್ನ ಗುರಿ ಸಾಧನೆಯತ್ತ ಮಹತ್ವದ ಹೆಜ್ಜೆ ಇರಿಸಿದೆ. 2025ರ ಮಾರ್ಚ್ ವೇಳೆಗೆ 10 ಲಕ್ಷ ಸೌರ ಮೇಲ್ಛಾವಣಿ ಸ್ಥಾಪನೆಗೆ ಗುರಿ ಹಾಕಿಕೊಂಡಿದ್ದು, 2027ರ ವೇಳೆಗೆ ಒಂದು ಕೋಟಿ ಘಟಕಗಳ ಸ್ಥಾಪನೆ ಪೂರೈಸಲು ಮುಂದಾಗಿದೆ.
ಯೋಜನೆ ಪ್ರಾರಂಭವಾದ ಬಳಿಕ ಮೇಲ್ಛಾವಣಿ ಸೌರ ಘಟಕ ಸ್ಥಾಪನೆ ಮಾಸಿಕವಾಗಿ ಹತ್ತು ಪಟ್ಟು ಹೆಚ್ಚಾಗುತ್ತಿವೆ. ಇನ್ನು ಮೂರು ತಿಂಗಳಲ್ಲಿ 10 ಲಕ್ಷ ಮೀರುವ ನಿರೀಕ್ಷೆಯಿದೆ. 2025ರ ಅಕ್ಟೋಬರ್ ವೇಳೆಗೆ 20 ಲಕ್ಷ, 2026ರ ಮಾರ್ಚ್ ವೇಳೆಗೆ 40 ಲಕ್ಷ ಮತ್ತು 2027ರ ಮಾರ್ಚ್ ವೇಳೆಗೆ ಒಂದು ಕೋಟಿ ಗುರಿ ತಲುಪುತ್ತದೆ ಎಂದು ನವೀಕರಿಸಬಹುದಾದ ಇಂಧನ ಸಚಿವಾಲಯ ವಿವರಣೆ ನೀಡಿದೆ.
PMSGMBY ಯೋಜನೆಯಡಿ ಕೇವಲ 9 ತಿಂಗಳಲ್ಲಿ 6.3 ಲಕ್ಷ ಸೌರ ಮೇಲ್ಛಾವಣಿ ಸ್ಥಾಪಿಸಲಾಗಿದೆ. ಗುಜರಾತ್, ಮಹಾರಾಷ್ಟ್ರ, ಕೇರಳ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳು ಅಸಾಧಾರಣ ಪ್ರಗತಿ ಪ್ರದರ್ಶಿಸಿವೆ.
ಸೂರ್ಯ ಘರ್ ಯೋಜನೆ ಫಲಾನುಭವಿಗಳಲ್ಲಿ ವಿದ್ಯುತ್ ಮಾರಾಟಗಾರರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಸುಮಾರು 9,000 ಮಾರಾಟಗಾರರು ಸಕ್ರಿಯರಾಗಿದ್ದಾರೆ ಮತ್ತು ಪ್ರತಿ ದಿನ ಹೆಚ್ಚು ಹೆಚ್ಚು ಸೇರ್ಪಡೆಯಾಗುತ್ತಿದ್ದಾರೆ. ಡಿಸ್ಕಾಂಗಳು ಈ ಯೋಜನೆಯಡಿ ಈಗಾಗಲೇ 40000 ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಿವೆ. ಮುಂದಿನ 8 ತಿಂಗಳಲ್ಲಿ ಹೆಚ್ಚುವರಿ 2 ಲಕ್ಷ ತಂತ್ರಜ್ಞರಿಗೆ ತರಬೇತಿ ನೀಡಲಾಗುವುದು ಎಂದು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೇ, 50,000ಕ್ಕೂ ಹೆಚ್ಚು DISCOM ಇಂಜಿನಿಯರ್ಗಳು ಮೇಲ್ಛಾವಣಿ ಸೌರ ಸ್ಥಾವರಗಳ ಪರಿಶೀಲನೆ ಮತ್ತು ಕಮಿಷನ್ ಮಾಡಲು ಹಾಗೂ ನೆಟ್ ಮೀಟರ್ಗಳನ್ನು ಒದಗಿಸಲು ವಿಶೇಷ ತರಬೇತಿ ಸಹ ಪಡೆಯುತ್ತಿದ್ದಾರೆ.
4 ಲಕ್ಷ ಗ್ರಾಹಕರಿಗೆ ಸಬ್ಸಿಡಿ ಸಂದಾಯ: ನವೆಂಬರ್ 2024ರ ವೇಳೆಗೆ 4 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ರೂ. 3,100 ಕೋಟಿಗೂ ಹೆಚ್ಚು ಸಬ್ಸಿಡಿ ಹಣ ವಿತರಿಸಲಾಗಿದೆ. ಮಾಸಿಕ ಸರಾಸರಿ 67,000 ಕುಟುಂಬಗಳು ಸಬ್ಸಿಡಿ ಪಡೆದಿವೆ. ಯೋಜನೆ ಅಳವಡಿಸಿಕೊಂಡ ಮನೆಗಳಿಗೆ 15 ದಿನಗಳಲ್ಲೇ ಸಬ್ಸಿಡಿ ಸಿಗುತ್ತಿರುವುದರಿಂದ ಗಣನೀಯ ಪ್ರಮಾಣದಲ್ಲಿ ಅರ್ಜಿಗಳು ಹರಿದು ಬರುತ್ತಿವೆ. ಈಗಾಗಲೇ ಶೇ.28ರಷ್ಟು ಕುಟುಂಬಗಳು ಶೂನ್ಯ ವಿದ್ಯುತ್ ಬಿಲ್ ಪಡೆಯುತ್ತಿವೆ ಎಂದು ಇಂಧನ ಸಚಿವಾಲಯ ಮಾಹಿತಿ ನೀಡಿದೆ.
ಜನ್ ಸಮರ್ಥ್ ಪೋರ್ಟಲ್: ಸೂರ್ಯ ಘರ್ ಯೋಜನೆಯಡಿ ವಿದ್ಯುತ್ ಮಾರಾಟಗಾರರನ್ನು ಪ್ರೋತ್ಸಾಹಿಸಲು 3kW ವರೆಗಿನ ಸಿಸ್ಟಮ್ಗಳಿಗಾಗಿ “ಜನ್ ಸಮರ್ಥ್ ಪೋರ್ಟಲ್” ಆರಂಭಿಸಿದ್ದು, ಫಲಾನುಭವಿಗಳಿಗೆ ಇದು ಕೈಗೆಟುಕುವ ಹಣಕಾಸು ಸೌಲಭ್ಯ ಆಯ್ಕೆ ಮಾಡಿಕೊಳ್ಳಲು ಪೂರಕವಾಗಿದೆ.
ಡಿಜಿಟಲಿಕರಣ-ಗ್ರಾಹಕ ಪ್ರಕ್ರಿಯೆ ಸರಳೀಕರಣ: ಗ್ರಾಹಕರ ನೋಂದಣಿ ಪ್ರಕ್ರಿಯೆ ಸರಳಗೊಳಿಸಲಾಗಿದೆ. ಸೂರ್ಯ ಘರ್ ಯೋಜನೆ ನೋಂದಣಿಗೆ ಈ ಹಿಂದೆ, ಅರ್ಜಿದಾರರು ಬಹು ದಾಖಲೆಗಲೊಂದಿಗೆ ಡಿಸ್ಕಾಂ ಕಚೇರಿಗಳಿಗೆ ಅಲೆಯಬೇಕಿತ್ತು. ಈಗ ಆ ತಾಪತ್ರಯವಿಲ್ಲ. ಎಲ್ಲದನ್ನೂ ಡಿಜಿಟಲೀಕರಣಗೊಳಿಸುವ ಮೂಲಕ ಪ್ರಕ್ರಿಯೆ ಸರಳಗೊಳಿಸಲಾಗಿದೆ.
ಐದೇ ನಿಮಿಷದಲ್ಲಿ ಅರ್ಜಿ ಸಲ್ಲಿಸಿ: ಸೂರ್ಯ ಘರ್ ಯೋಜನೆ ಆಕಾಂಕ್ಷಿಗಳು ವೆಬ್ ಸೈಟ್ ಅಲ್ಲಿ ನೇರವಾಗಿ ಮತ್ತು ಅಷ್ಟೇ ತ್ವರಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. www.pmsuryaghar.gov.in ನಲ್ಲಿ ಈಗ ಐದೇ ನಿಮಿಷಗಳಲ್ಲಿ ಅರ್ಜಿ ಸಲ್ಲಿಸಬಹುದು.