ಬೆಂಗಳೂರು: ಸತ್ಯದ ಅನ್ವೇಷಣೆಯೇ ಪತ್ರಿಕೋದ್ಯಮದ ಮೂಲ ಮಂತ್ರ. ಸತ್ಯಕ್ಕೆ ಹತ್ತಿರವಾದ ಸುದ್ದಿಗಳನ್ನು ಮಾಡುವ ಮೂಲಕ ಪತ್ರಿಕೋದ್ಯಮದ ವಿಶ್ವಾಸರ್ಹತೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಕರೆ ನೀಡಿದರು.
ಬೆಂಗಳೂರಿನ ಸೆಂಟ್ ಜೋಸೆಫ್ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಿಂದ ಏರ್ಪಡಿಸಿದ್ದ ವಿದ್ಯಾರ್ಥಿಗಳ ಜೊತೆಗಿನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಾತ್ಮಗಾಂಧಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಕೂಡ ಪತ್ರಕರ್ತರಾಗಿದ್ದು ಈ ದೇಶದಲ್ಲಿ ಆದರ್ಶದ ಬೀಜಗಳನ್ನು ಬಿತ್ತಿದ್ದಾರೆ. ಆ ಬೆಳಕಲ್ಲಿ ನಡೆಯುವ ಬದ್ದತೆಯನ್ನು ನಾವು ತೋರಿಸಬೇಕಾಗಿದೆ ಎಂದರು. 1843ರಲ್ಲಿ ಹರ್ಮನ್ ಮೊಗ್ಲಿನ್ ಮಂಗಳೂರಿನಲ್ಲಿ ಪ್ರಾರಂಭಿಸಿದ ಮಂಗಳೂರು ಸಮಾಚಾರ ಪತ್ರಿಕೆಯೇ ಕನ್ನಡದ ಮೊಟ್ಟ ಮೊದಲ ಪತ್ರಿಕೆ.
ಅಂದಿನಿಂದ ಈ ತನಕ ಪತ್ರಿಕೋದ್ಯಮ ನಾನಾ ಮಗ್ಗುಲುಗಳನ್ನು ಬದಲಿಸಿದೆ. ಕಳೆದ ಎರಡು ದಶಕಗಳಲ್ಲಿ ಮಾಧ್ಯಮ ಕ್ಷೇತ್ರ ಕ್ರಾಂತಿಕಾರಿ ಬದಲಾವಣೆ ಹೊಂದಿದೆ. ಆದರೆ, ವಿಶ್ವಾಸರ್ಹತೆ ಎನ್ನುವುದು ಕಡಿಮೆ ಆಗುತ್ತಿರುವುದು ಆತಂಕದ ಸಂಗತಿ ಎಂದರು.ಕಲಿಕೆಯ ಉತ್ಸಾಹದ ಜೊತೆಗೆ ಸುದ್ದಿಯನ್ನು ಪರಾಮರ್ಶೆ ಮಾಡಿ ನೋಡುವ ವ್ಯವದಾನ ಕೂಡ ಇರಬೇಕು. ಈ ನಿಟ್ಟಿನಲ್ಲಿ ಪತ್ರಿಕೋದ್ಯಮ ವೃತ್ತಿಯನ್ನು ಒಂದು ದೀಕ್ಷೆ ಎಂದು ಪರಿಭಾವಿಸಿ ಕೆಲಸ ಮಾಡಿದರೆ ಮತ್ತಷ್ಟು ವಿಶ್ವಾಸರ್ಹತೆಯನ್ನು ತಂದುಕೊಳ್ಳಲು ಸಾಧ್ಯವಿದೆ ಎಂದರು.
ಟಿವಿ5 ಸಂಪಾದಕ ರಮಾಕಾಂತ್ ಮಾತನಾಡಿ, ಯುವ ಪತ್ರಕರ್ತರು ಧಾವಂತದಲ್ಲಿ ಸುದ್ದಿಮನೆಗೆ ಬರುತ್ತಿದ್ದಾರೆ. ಅವರು ಇನ್ನಷ್ಟು ಅಧ್ಯಯನಶೀಲರಾಗುವುದು ಅತ್ಯಗತ್ಯವಾಗಿದೆ. ಭಾಷೆ, ವ್ಯಾಕರಣ ಬಳಕೆ ಬಗ್ಗೆಯೂ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಬೆಂಗಳೂರಿನ ಸೆಂಟ್ ಜೋಸ್ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ರಜಿನಾ ಮಥಾಯಿಸ್ ಅಧ್ಯಕ್ಷತೆ ವಹಿಸಿದ್ದರು. ರಿಜಿಸ್ಟಾರ್ ಮೆಲ್ವಿನ್ ಕೊಲಾಸ್ ಹಾಜರಿದ್ದರು.