ಕೊಡಗು: ಜಮ್ಮು ಕಾಶ್ಮೀರದಲ್ಲಿ ಸೇನಾ ವಾಹನ ಕಮರಿಗೆ ಬಿದ್ದು ಗಾಯಗೊಂಡಿದ್ದ ಕೊಡಗು ಮೂಲದ ಯೋಧ ದಿವಿನ್ (28) ಚಿಕಿತ್ಸೆ ಫಲಿಸದೆ ಹುತಾತ್ಮರಾಗಿದ್ದಾರೆ. ಕಳೆದ ವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ವಾಹನ ಕಮರಿಗೆ ಬಿದ್ದು ನಾಲ್ವರು ಯೋಧರು ಹುತಾತ್ಮರಾಗಿದ್ದರು.
ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಿವಿನ್ ಅವರನ್ನು ಶ್ರೀನಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೇನಾಧಿಕಾರಿಗಳ ತುರ್ತು ಕರೆ ಹಿನ್ನೆಲೆ ಯೋಧನ ತಾಯಿ ಜಯ ಅವರು ಶ್ರೀನಗರಕ್ಕೆ ತೆರಳಿದ್ದರು. ಇದೀಗ ಅವರು ಹುತಾತ್ಮರಾಗಿರುವ ಸುದ್ದಿ ವರದಿಯಾಗಿದೆ.
ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರ ಗ್ರಾಮದ ಯೋಧ ದಿವಿನ್, ತಂದೆ ತಾಯಿಗೆ ಏಕೈಕ ಮಗನಾಗಿದ್ದು, 10 ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು. ಶ್ವಾಸಕೋಶಕ್ಕೆ ತೀವ್ರ ಹಾನಿ ಆದ ಹಿನ್ನಲೆಯಲ್ಲಿ ಭಾನುವಾರ ರಾತ್ರಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ದಿವಿನ್ ಅವರಿಗೆ ಇತ್ತೀಚಿಗೆ ಕೊಡಗು ಮೂಲದ ಯುವತಿ ಜೊತೆ ಮದುವೆಗೆ ದಿನಾಂಕ ಕೂಡ ನಿಗದಿಯಾಗಿತ್ತು ಎನ್ನಲಾಗಿದೆ.
ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನ ಪಲ್ಟಿಯಾಗಿ ಕರ್ನಾಟಕದ ಮೂವರು ಯೋಧರು ಸೇರಿ ಮರಾಠಾ ರೆಜಮೇಂಟನ ಒಟ್ಟು ಐವರು ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಹಲವು ಯೋಧರು ಗಾಯಗೊಂಡಿದ್ದರು.
ಭೀಕರ ದುರಂತದಲ್ಲಿ ಕರ್ನಾಟಕದ ಮೂವರು ಸೇರಿದಂತೆ ಒಟ್ಟು ಐವರು ಹುತಾತ್ಮರಾಗಿದ್ದರು. ಬೆಳಗಾವಿ ಬಳಿಯ ಸಾಂಬ್ರಾ ಗ್ರಾಮದ ಯೋಧ ಸುಬೇದಾರ್ ದಯಾನಂದ ತಿರಕಣ್ಣವರ (45) ಕುಂದಾಪುರ ಬಳಿಯ ಕೋಟೇಶ್ವರ ಬಿಜಾಡಿಯ ಅನೂಪ್ (33) ಮಹಾಲಿಂಗಪುರದ 25 ವರ್ಷದ ಮಹೇಶ್ ಮರಿಗೊಂಡ ಹುತಾತ್ಮರಾಗಿದ್ದರು. ಈ ದುರಂತದಲ್ಲಿ ಗಾಯಗೊಂಡಿದ್ದ ದಿವಿನ್ ಭಾನುವಾರ ಚಿಕಿತ್ಸೆ ಫಲಿಸದೇ ಹುತಾತ್ಮರಾಗಿದ್ದಾರೆ.