ಬೆಳಗಾವಿ: ರಾಜ್ಯದಲ್ಲಿ ಸೈಬರ್ ಅಪರಾಧ ನಿಯಂತ್ರಣ ಮತ್ತು ಸೈಬರ್ ಸುರಕ್ಷತೆಗಾಗಿ ಹೊಸದಾಗಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹುದ್ದೆಯೊಂದನ್ನು ಸೃಷ್ಟಿಸಲಾಗಿದೆ, ಇದು ಭಾರತದಲ್ಲೇ ಮೊದಲು ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರು ವಿಧಾನಸಭೆಗೆ ಮಂಗಳವಾರ ತಿಳಿಸಿದರು.
ಕಾಂಗ್ರೆಸ್ನ ಎನ್.ಎ. ಹ್ಯಾರಿಸ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಸೈಬರ್ ಅಪರಾಧಗಳ ಮೇಲೆ ನಿಗಾ ಇಡಲು ಪ್ರತ್ಯೇಕವಾಗಿ ಡಿಜಿಪಿ ಇರಲಿದ್ದಾರೆ, ಶೀಘ್ರದಲ್ಲೇ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ನೂತನ ಡಿಜಿಪಿ ಅವರ ಅಧೀನದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಐಜಿಪಿ, ಎಸ್ಪಿ ಮತ್ತು ಕಿರಿಯ ಅಧಿಕಾರಿಗಳು ಇರುತ್ತಾರೆ. ಸೈಬರ್ ಅಪರಾಧ ಪ್ರಕರಣಗಳ ತನಿಖೆಯ ಮೇಲುಸ್ತುವಾರಿಗಾಗಿ ಏಳು ವಲಯಗಳಿಗೂ ತಲಾ ಒಬ್ಬ ಎಸ್ಪಿಯನ್ನು ನೇಮಿಸಲಾಗಿದೆ. 43 ಸೈಬರ್ ಅಪರಾಧ (ಸೆನ್) ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ ಎಂದರು.
ಗುಜರಾತ್ನಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಸೈಪರ್ ಅಪರಾಧ ನಿಯಂತ್ರಣಕ್ಕೆ ಸಂಬಂಧಿಸಿದ ಅಧ್ಯಯನಗಳು ನಡೆಯುತ್ತಿವೆ. ಅದೇ ಮಾದರಿಯಲ್ಲಿ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು. ಬೆಂಗಳೂರು ನಗರದಲ್ಲಿ 7,500 ಸಿಸಿಟಿವಿ ಕ್ಯಾಮೆರಾಗಳನ್ನು ಕಮಾಂಡ್ ಸೆಂಟರ್ಗೆ ಜೋಡಿಸಲಾಗಿದೆ. ಇತರ 1,000 ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ವಿಶೇಷ ಕಮಾಂಡ್ ಸೆಂಟರ್ ಜೊತೆ ಜೋಡಿಸಲಾಗುವುದು. ಸ್ಮಾರ್ಟ್ ಸಿಟಿಗಳನ್ನು ಹೊರತುಪಡಿಸಿದ ನಗರಗಳಲ್ಲೂ ಕಮಾಂಡ್ ಸೆಂಟರ್ಗಳನ್ನು ಅಸ್ತಿತ್ವಕ್ಕೆ ತರಲಾಗುವುದು ಎಂದರು. ರಾಜ್ಯದಲ್ಲಿ 120 ಕೋಟಿ ರೂ.ಗಳ ವೆಚ್ಚದಲ್ಲಿ ಕಮಾಂಡ್ ಸೆಂಟರ್ ಸ್ಥಾಪಿಸಲಾಗುವುದು, ಇಲ್ಲಿ ಆರು ಲಕ್ಷ ಸಿಸಿಟಿವಿ ಕ್ಯಾಮೆರಾಗಳನ್ನು ವಿವಿಧ ರಾಜ್ಯ ಸರ್ಕಾರಿ ಇಲಾಖೆಗಳಲ್ಲಿ ಅಳವಡಿಸಲಾಗುವುದು ಎಂದರು.