ಮುಂಬೈ: ಡಿಜಿಟಲ್ ಬಂಧನ ಪ್ರಕರಣದಲ್ಲಿ 68 ವರ್ಷದ ಮಹಿಳೆಯೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ 1.25 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸಂತ್ರಸ್ತೆ ಗೋರೆಗಾಂವ್ ನಗರದ ನಿವಾಸಿಯಾಗಿದ್ದು, ಪತಿಯೊಂದಿಗೆ ವಾಸಿಸುತ್ತಿದ್ದಾರೆ.
ನವೆಂಬರ್ನಲ್ಲಿ ಕ್ರೈಂ ಬ್ರಾಂಚ್ನ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನ ಪ್ರಕಾರ, ಅಪರಿಚಿತ ಮಹಿಳೆಯಿಂದ ವೃದ್ಧೆಗೆ ಕರೆ ಬಂದಿದ್ದು, ಆಕೆ ತನ್ನನ್ನು ತಾನು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಕಾರ್ಯನಿರ್ವಾಹಕಿ ಎಂದು ಪರಿಚಯಿಸಿಕೊಂಡಿದ್ದಾಳೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನ್ನ ಕ್ರೆಡಿಟ್ ಕಾರ್ಡ್ ಬಾಕಿ ಪಾವತಿಸದಿದ್ದಕ್ಕಾಗಿ ಕೇಸ್ ದಾಖಲಿಸುವುದಾಗಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾರೆ ಮತ್ತು ಹೈದರಾಬಾದ್ ಪೊಲೀಸರೊಂದಿಗೆ ಮಾತನಾಡುವಂತೆ ಕೇಳಿಕೊಂಡಿದ್ದಾಳೆ.
ನಂತರ ಕರೆ ಮಾಡಿದ ವ್ಯಕ್ತಿ ತನ್ನನ್ನು ತಾನು ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಹೈದರಾಬಾದ್ನಲ್ಲಿ 500 ಕೋಟಿ ರೂಪಾಯಿ ಆರ್ಥಿಕ ವಂಚನೆಯಲ್ಲಿ ಬಳಸಲಾಗಿದೆ ಮತ್ತು 20 ಲಕ್ಷ ರೂಪಾಯಿ ನಿಮ್ಮ ಖಾತೆಗೆ ಜಮಾ ಮಾಡಲಾಗಿದೆ ಎಂದು ಹೇಳಿದ್ದಾನೆ.
ನಂತರ ಆ ವ್ಯಕ್ತಿ ತಾನು ಕರೆಯನ್ನು ಸಿಬಿಐ ಅಧಿಕಾರಿಯೊಬ್ಬರಿಗೆ ವರ್ಗಾಯಿಸುತ್ತಿರುವುದಾಗಿ ಹೇಳಿದ್ದು, ಅವರು ಸಂತ್ರಸ್ತ ಮಹಿಳೆಗೆ ವಿಡಿಯೋ ಕರೆ ಮಾಡಿ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ವಂಚಕರು ಸಂತ್ರಸ್ತೆಯನ್ನು ಬಂಧಿಸುವ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಲು ಮತ್ತು ಅವರ ನಿವಾಸದಲ್ಲಿ ಇರುವಂತೆ ಕೇಳಿಕೊಂಡಿದ್ದಾರೆ. ಆಕೆಯ ಪತಿ ಸೇರಿದಂತೆ ಯಾವುದೇ ಸಂಬಂಧಿಕರಿಗೆ ತಿಳಿಸಬೇಡಿ ಎಂದು ಸೂಚಿಸಿದ್ದಾರೆ.
ವಂಚಕರು ಆಕೆಯನ್ನು ಬಂಧನದಿಂದ ರಕ್ಷಿಸಲು ತಾವು ನೀಡಿದ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಬೇಕೆಂದು ಹೇಳಿದ್ದಾರೆ. ಅದರಂತೆ ಮಹಿಳೆ ಮಹಿಳೆಯು ಒಂದು ತಿಂಗಳ ಅವಧಿಯಲ್ಲಿ ಸುಮಾರು 1.25 ಕೋಟಿ ರೂ. ಜಮೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.