ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಯಿಂದ ಸಾಲ ಪಡೆದವರು ಕಂಗಾಲಾಗಿದ್ದು, ಈ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಉನ್ನತಮಟ್ಟದ ಸಚಿವರ ಸಮಾಲೋಚನೆ ಸಭೆ ನಡೆದಿದೆ.ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ. ಜಿ. ಪರಮೇಶ್ವರ್, ಎಚ್.ಕೆ. ಪಾಟೀಲ್, ಕೃಷ್ಣಭೈರೇಗೌಡ, ಕೆ.ಗೋವಿಂದರಾಜು, ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದಾರೆ.
ಖಾಸಗಿ ಹಣಕಾಸು ಸಂಸ್ಥೆಗಳವರಿಂದ ಸಾಲ ಪಡೆದವರಿಗೆ ಕಿರುಕುಳ ನೀಡಲಾಗುತ್ತಿದ್ದು, ಈಗಾಗಲೇ 3ಕ್ಕೂ ಹೆಚ್ಚು ಮಂದಿ ಆತ್ಮಹತ್ಯೆಗೆ ಶರಣಾಗಿದ್ದು, ಕೆಲ ಜಿಲ್ಲೆಗಳ ಗ್ರಾಮಗಳಲ್ಲಿ ಸಾಲ ಪಡೆದವರು ಗ್ರಾಮವನ್ನೇ ತೊರೆದಿರುವ ಘಟನೆಗಳು ನಡೆದಿವೆ. ಹಾಗಾಗಿ ಇಂತಹ ಪ್ರಕರಣಗಳು ಸಂಭವಿಸದಂತೆ ಇರಲು ಮಸೂದೆಯೊಂದನ್ನು ತರಲು ಸರ್ಕಾರ ಮುಂದಾಗಿದೆ. ಈ ಮಸೂದೆಯಲ್ಲಿ ಸಾಲ ನೀಡಿದ್ದ ಸಂಸ್ಥೆಗಳವರು ಸಾಲಗಾರರಿಗೆ ಕಿರುಕುಳ ನೀಡಿದರೆ ಅಂತಹವರ ವಿರುದ್ಧ ಜಾಮೀನು ರಹಿತ ದೂರು ದಾಖಲು, ಅಪರಾಧಿಗಳಿಗೆ ಮೂರು ವರ್ಷ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಕ್ರೆಡಿಟ್ ಕೋ ಆಪ್ರೇಟಿವ್ ಸೊಸೈಟಿ ಆರಂಭಿಸಲು ಚಿಂತನೆ ನಡೆಸಲಾಗಿದೆ.
ಈ ಸೊಸೈಟಿ ವತಿಯಿಂದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲ ನೀಡುವ ಯೋಜನೆಯನ್ನು ಆರಂಭಿಸೋದು, ಕಡಿಮೆ ಬಡ್ಡಿ ದರದಲ್ಲ ಸಾಲ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ.
ಈ ಸಂಬಂಧ ಈಗಾಗಲೇ ಅಧಿಕಾರಿಗಳು ರಾಜಸ್ಥಾನ, ತೆಲಂಗಾಣಕ್ಕೆ ತೆರಳಿ ಅಧ್ಯಯನ ನಡೆಸಿ ವರದಿ ನೀಡಿದ್ದಾರೆ ಎಂದು ಹೇಳಲಾಗಿದೆ. ಒಟ್ಟಾರೆ ಮೈಕ್ರೋ ಫೈನಾನ್ಸ್ನವರ ಹಾವಳಿ ತಡೆಗೆ ಸರ್ಕಾರ ಮುಂದಾಗಿದೆ.