ಮಂಡ್ಯ: ಬೆಂಗಳೂರಿನಲ್ಲಿ ನಿಧನರಾಗಿರುವ ಮಾಜಿ ಸಿಎಂ ಎಸ್ಎಂ ಕೃಷ್ಣ ಅಂತ್ಯಕ್ರಿಯೆ ಅವರ ತವರು ಮದ್ದೂರಿನ ಸೋಮನಹಳ್ಳಿಯಲ್ಲಿ ಬುಧವಾರ ಸಂಜೆ ನಡೆಯಲಿದೆ. ಎಸ್ಎಂ ಕೃಷ್ಣಗೆ ಇಷ್ಟವಾದ ಜಾಗದಲ್ಲಿಯೇ, ಅಂದರೆ ಕಾಫಿಡೇ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ವಿದೇಶದಿಂದ ಸಂಬಂಧಿಕರು ಬರಬೇಕಿರುವ ಹಿನ್ನೆಲೆ ನಾಳೆ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.
ಸದ್ಯ ಮದ್ದೂರಿನ ಸೋಮನಹಳ್ಳಿಯಲ್ಲಿರುವ ಕಾಫಿ ಡೇ ಆವರಣದಲ್ಲಿ ಜೆಸಿಬಿ ಮೂಲಕ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ.
ಸೋಮನಹಳ್ಳಿಯಲ್ಲಿ ಎಸ್ಎಂ ಕೃಷ್ಣ ಬೃಹತ್ ಮನೆ ನಿರ್ಮಿಸಿದ್ದರು. ಅದು ಅವರ ಇಷ್ಟದ ಸ್ಥಳ, ಮನೆಯೂ ಆಗಿತ್ತು. ಆದರೆ, ಬೆಂಗಳೂರು ಸೇರಿದ ಮೇಲೆ ಅವರ ಇಷ್ಟದ ಆ ಮನೆ ಖಾಲಿ ಇತ್ತು. ನಂತರದಲ್ಲಿ ಅವರು ಆ ಮನೆಯನ್ನು ಅಳಿಯ ಸಿದ್ದಾರ್ಥ್ ಅವರ ಕಾಫಿ ಡೇಗೆ ನೀಡಿದ್ದರು. ಮಂಡ್ಯಕ್ಕೆ ಬಂದಾಗಲೆಲ್ಲ ಕಾಫೀ ಡೇಯಲ್ಲಿ ಕಾಲ ಕಳೆಯುತ್ತಿದ್ದರು. ಅವರಿಗೆ ಇಷ್ಟವಾಗಿದ್ದ ಕಾಫಿ ಡೇ ಆವರಣದಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ. ಅಂತ್ಯಸಂಸ್ಕಾರಕ್ಕೆ ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ಸಿದ್ಧತೆ ನಡೆಯುತ್ತಿದೆ.
ಏತನ್ಮಧ್ಯೆ, ಎಸ್ಎಂ ಕೃಷ್ಣ ಬಗ್ಗೆ ಸೋಮನಹಳ್ಳಿ ಕೆಫೆ ಕಾಫಿ ಡೇ ಮ್ಯಾನೇಜರ್ ಅವಿನಾಶ್ ‘ಟಿವಿ9’ ಜತೆ ಮಾತನಾಡಿದ್ದು, ಕೃಷ್ಣ ಅವರು ಎರಡು ತಿಂಗಳ ಹಿಂದೆ ಇಲ್ಲಿಗೆ ಬಂದಿದ್ದರು. ಸಿಬ್ಬಂದಿ ಜೊತೆ ಬಹಳ ಪ್ರಿತಿಯಿಂದ ಮಾತನಾಡುತ್ತಿದ್ದರು. ಇದು ಅವರ ಗೆಸ್ಟ್ ಹೌಸ್ ಆಗಿತ್ತು. ಆನಂತರ ಇದನ್ನು ಕಾಫಿ ಡೇಗೆ ಕೊಟ್ಟರು. ಇಲ್ಲಿ ಅವರದ್ದೂ ಒಂದು ಕೊಠಡಿ ಇದೆ. ಅವರ ಸಾವಿನ ವಿಚಾರ ಕೇಳಿ ಬೇಸರ ಆಗಿದೆ ಎಂದರು.
ಮಾಜಿ ಸಿಎಂ ಎಸ್ಎಂ ಕೃಷ್ಣಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿರುವ ಅವರು ಹುಟ್ಟಿದ ಮನೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅವರ ಸಂಬಂಧಿಕರು ಎಸ್ಎಂ ಕೃಷ್ಣ ಫೋಟೋಗೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಏತನ್ಮಧ್ಯೆ, ಡಿಸಿಎಂ ಡಿಕೆ ಶಿವಕುಮಾರ್ ಬೆಳಗಾಂವಿಯಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಎಸ್ಎಂ ಕೃಷ್ಣ ಅಂತಿಮ ದರ್ಶನ ಪಡೆಯಲು ಅವರು ಬೆಂಗಳೂರಿಗೆ ಆಗಮಿಸಿದ್ದಾರೆ.