ರಾಮನಗರ: ಈ ಸೋಲನ್ನು ನಾನು ಸ್ವೀಕಾರ ಮಾಡ್ತೇನೆ. ಆದರೆ ಸೋತಿದ್ದೇನೆ ಅಂತ ಸುಮ್ಮನೇ ಕೂರಲ್ಲ, ಹೋರಾಟ ಮಾಡುತ್ತೇನೆ ಎಂದು ಎನ್ ಡಿಎ ಅಭ್ಯರ್ಥಿ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಶನಿವಾರ ಹೇಳಿದ್ದಾರೆ.
ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಎಲ್ಲಾ ಮೂರು ಕ್ಷೇತ್ರಗಳಲ್ಲೂ ಆಡಳಿತರೂಢ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರು, ನಿಖಿಲ್ ಕುಮಾರಸ್ವಾಮಿ ವಿರುದ್ಧ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ನಿಖಿಲ್ ಕುಮಾರಸ್ವಾಮಿ ಹ್ಯಾಟ್ರಿಕ್ ಸೋಲು ಅನುಭವಿಸಿದ್ದಾರೆ.
ಫಲಿತಾಂಶದ ಬಳಿಕ ಬಿಡದಿಯ ತಮ್ಮ ತೋಟದ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮತದಾರರ ತೀರ್ಪಿಗೆ ನಾನು ತಲೆಬಾಗುತ್ತೇನೆ. 87 ಸಾವಿರ ಮತ ನೀಡಿದ ಚನ್ನಪಟ್ಟಣ ಜನರಿಗೆ ಧನ್ಯವಾದ ತಿಳಿಸುತ್ತೇನೆ. ಜೆಡಿಎಸ್, ಬಿಜೆಪಿ ಕಾರ್ಯಕರ್ತರಿಗೂ ನಾನು ಧನ್ಯವಾದ ಸಮರ್ಪಿಸುತ್ತೇನೆ ಎಂದು ಹೇಳಿದರು.
ನಾನು ಸೋತರೂ ರಾಮನಗರ ಜಿಲ್ಲೆಯಲ್ಲಿ ಎಲ್ಲರಿಗೂ ಧ್ವನಿಯಾಗಿ ಕೆಲಸ ಮಾಡ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಮಾನವೇ ಅಂತಿಮ. ಎಲ್ಲಿ ಎಡವಿದ್ದೇವೆ ಅಂತ ಚರ್ಚೆ ಮಾಡುತ್ತೇವೆ ಎಂದರು.
ಎಚ್ಡಿ ದೇವೇಗೌಡ, ಎಚ್ಡಿ ಕುಮಾರಸ್ವಾಮಿ ಅವರನ್ನು ಬೆಳೆಸಿದ್ದು ರಾಮನಗರ ಜಿಲ್ಲೆಯ ಜನ. ಚುನಾವಣೆ ಸಂದರ್ಭದಲ್ಲಿ ಜನರಿಗೆ ನಾನು ಭರವಸೆ ಕೊಟ್ಟಿದ್ದೆ. ಆ ಭರವಸೆ ಕೇವಲ ಚುನಾವಣೆಗೆ ಸಂಬಂಧಪಟ್ಟಿದ್ದಲ್ಲ. ನಾನು ಕೊಟ್ಟ ಮಾತನ್ನು ಹಿಂಪಡೆಯಲ್ಲ ಎಂದರು.
ನಾನು ರಾಮನಗರದಲ್ಲಿ ಜನಿಸಿಲ್ಲ, ಆದರೆ, ಭಾವನಾತ್ಮಕ ಸಂಬಂಧವಿದೆ. ನಾನು ಎಚ್ಡಿ ಕುಮಾರಸ್ವಾಮಿ ಅವರ ಜೊತೆ ಸೇರಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತೇನೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ದುಡಿದಿದ್ದಾರೆ. ಒಂದು ಸಮುದಾಯದ ಮತದಾರರು ಕಾಂಗ್ರೆಸ್ ಪರ ನಿಂತಿದ್ದಾರೆ. ಆದರೆ ಈ ಸೋಲಿನಿಂದ ಎದೆಗುಂದುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.