ಕಳೆದ ವರ್ಷ ತೆರೆಕಂಡ `ಶೋಷಿತೆ’ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ,ಪತ್ರಿಕೆಗಳಿಂದ ಒಳ್ಳೆಯ ವಿಮರ್ಶೆ ಬಂದಿದ್ದರೂ ಗಳಿಕೆಯಲ್ಲಿ ಹಿಂದೇಟು ಹಾಕಿತ್ತು. ಟೆಕ್ಕಿ ಶಶಿಧರ್ ಕಥೆ, ಚಿತ್ರಕಥೆ, ಸಂಭಾಷಣೆ, ಸಂಕಲನ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. `ಎ ನೇಚರ್ ವ್ಯೂ ಔಟ್ಡೋರ್ ಕಾರ್ನಿವಲ್ ಪ್ರೊಡಕ್ಷನ್’ ಮೂಲಕ ಶಿರೀಶಾ ಆಳ್ವ ನಿರ್ಮಾಣ ಮಾಡಿದ್ದರು.
ನಿರ್ದೇಶಕರು ಎಂಟು ತಿಂಗಳಿಗೂ ಹೆಚ್ಚು ಕಾಲ ಅಮೆಜಾನ್, ನೆಟ್ಫ್ಲಿಕ್ಸ್ ದಂತಹ ಪ್ರಮುಖ ಓಟಿಟಿ ಪ್ಲಾಟ್ ಫಾರ್ಮ್ ಕಚೇರಿಯನ್ನು ಸಂಪರ್ಕಿಸಿದರೂ, ಕನ್ನಡ ಚಿತ್ರ ಎಂಬ ಏಕೈಕ ಕಾರಣದಿಂದ ಯಾವುದೇ ಸ್ಪಂದನೆ ನೀಡದೆ ನಿರಾಕರಿಸಿದರು. ಇದರಿಂದ ವಿಚಲಿತಗೊಳ್ಳದ ತಂಡವು ಕಂಟೆಂಟ್ ತೂಕವಾಗಿದ್ದರೆ ಜನರು ನೋಡುತ್ತಾರೆ ಎಂಬ ಅಭಿಲಾಷೆಯಿಂದ ಸಿನಿಮಾವನ್ನು ತೆಲುಗು ಭಾಷೆಗೆ ಡಬ್ ಮಾಡಿ `ಶ್ರೀಮತಿ’ ಹೆಸರಿನೊಂದಿಗೆ ಯೂಟ್ಯೂಬ್ಗೆ ಬಿಡಲಾಯಿತು. ಆಶ್ಚರ್ಯ ಎನ್ನುವಂತೆ ಒಂದು ತಿಂಗಳೊಳಗೆ 20 ಲಕ್ಷ ಜನರು ನೋಡಿದ್ದಾರೆ. ಕೆಲವರು ಸಿನಿಮಾವನ್ನು ಇಷ್ಟಪಟ್ಟು ಟಿಕೆಟ್ ದರ ಅಂತ ಹಣ ಪಾವತಿಸಿದ್ದಾರೆ.
ಅಂತೆಯೇ ಕನ್ನಡದಲ್ಲೂ ಯೂಟ್ಯೂಬ್ದಲ್ಲಿ ಬಿಡುಗಡೆ ಮಾಡಿದ ಕೇವಲ ಒಂದು ವಾರದಲ್ಲಿ ಇಪ್ಪತ್ತೈದು ಲಕ್ಷ ನಿಮಿಷಗಳ ವೀಕ್ಷಣೆ ಕಂಡು ಸ್ಟ್ರೀಮ್ ಆಗುತ್ತಿದೆ. ಇಷ್ಟಪಡುವ ಅಂಶಗಳು ಇದ್ದರೆ, ಸ್ಟಾರ್ಗಳು ಇಲ್ಲದಿದ್ದರೂ ಇಂತಹ ಸಿನಿಮಾವನ್ನು ಮೆಚ್ಚಿಕೊಳ್ಳುತ್ತಾರೆ ಎಂಬುದಕ್ಕೆ ಶೋಷಿತೆ ಸಾಬೀತು ಮಾಡಿದೆ. ಮುಂದೆಯೂ ತಮಿಳು, ಹಿಂದಿ ಮತ್ತು ಮಲೆಯಾಳಂಗೆ ಡಬ್ ಮಾಡಲು ಯೋಜನೆ ರೂಪಿಸಿಕೊಂಡಿದ್ದಾರೆ. ಅಲ್ಲದೆ ಮೊದಲ ಪ್ಯಾನ್ ಇಂಡಿಯಾ ಯೂಟ್ಯೂಬ್ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಧ್ಯಮವರ್ಗದ ಗೃಹಿಣಿಯೊಬ್ಬಳ ಹೋರಾಟ. ಸಮಾಜದಲ್ಲಿ ಮತ್ತೋಬ್ಬರ ದೌರ್ಬಲ್ಯ, ಒಳ್ಳೆಯತನದ ಲಾಭ ಪಡೆದುಕೊಳ್ಳುವವರು, ತರಾತುರಿಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳಿಂದ ಸಂಕಷ್ಟಕ್ಕೆ ಸಿಲುಕುವುದು. ಪತಿ-ಪತ್ನಿಯರ ಸಂಬಂದದಲ್ಲಿನ ತಪ್ಪುಗಳಿಗೆ ಒಬ್ಬರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎನ್ನುವ ಸಂದೇಶವನ್ನು ಸಾರಲಾಗಿದೆ.
`ಕಲರ’ಸ್ ಕನ್ನಡ’ ವಾಹಿನಿಯ ಖ್ಯಾತಿ ನಿರೂಪಕಿ ಹಾಗೂ ಹದಿನೈದಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ.ಜಾನ್ವಿರಾಯಲ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. `ಕೆಜಿಎಫ್’ದಲ್ಲಿ ಅಭಿನಯಿಸಿರುವ ರೂಪರಾಯಪ್ಪ ಖಳನಾಯಕಿ. ಇವರೊಂದಿಗೆ ವೆಂಕ್ಷ, ಪ್ರಶಾಂತ್, ದರ್ಶನ್ ಹಾಗೂ ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ನೋಡುಗರಿಗೆ ಕನೆಕ್ಟ್ ಆಗುವ ಸಿನಿಮಾವು ಒಂದು ಗಂಟೆ ನಲವತ್ತೆರಡು ನಿಮಿಷ ಇರಲಿದ್ದು, ಸಂತಸ ನೀಡಲಿದೆ.